ADVERTISEMENT

IPS ಜಗಳ: ಡಿಐಜಿ ವರ್ತಿಕಾ ಕಟಿಯಾರ್‌ ವಿರುದ್ಧ ಈಗ ಡಿ.ರೂಪಾ ದೂರು!

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 0:32 IST
Last Updated 6 ಮಾರ್ಚ್ 2025, 0:32 IST
<div class="paragraphs"><p> ಡಿ.ರೂಪಾ, ವರ್ತಿಕಾ ಕಟಿಯಾರ್‌</p></div>

ಡಿ.ರೂಪಾ, ವರ್ತಿಕಾ ಕಟಿಯಾರ್‌

   

ಬೆಂಗಳೂರು: ರಾಜ್ಯ ಆಂತರಿಕ ಭದ್ರತಾ ವಿಭಾಗದ(ಐಎಸ್‌ಡಿ) ಡಿಐಜಿಯಾಗಿದ್ದ ವರ್ತಿಕಾ ಕಟಿಯಾರ್ ವಿರುದ್ಧ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ ವ್ಯವಸ್ಥಾಪಕ ನಿರ್ದೇಶಕಿಯಾಗಿ ವರ್ಗಾವಣೆಗೊಂಡಿರುವ ಡಿ.ರೂಪಾ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ದೂರು ನೀಡಿದ್ದಾರೆ.

‘ರೂಪಾ ಅವರು ಕೆಳಹಂತದ ಸಿಬ್ಬಂದಿ ಬಳಸಿಕೊಂಡು ತಮ್ಮ ಕೊಠಡಿಯನ್ನು ಅನಧಿಕೃತವಾಗಿ ಪ್ರವೇಶಿಸಿ, ಕೆಲವು ದಾಖಲೆಗಳನ್ನು ಇರಿಸಿದ್ದಾರೆ’ ಎಂದು ಆರೋಪಿಸಿ ವರ್ತಿಕಾ ಅವರು ಶಾಲಿನಿ ರಜನೀಶ್‌ ಅವರಿಗೆ ದೂರು ನೀಡಿದ್ದರು. ಇದೀಗ ರೂಪ ಸಹ ಸಹ ದೂರು ನೀಡಿದ್ದಾರೆ.

ADVERTISEMENT

‘ರೂಪಾ ಅವರ ಆದೇಶದಂತೆ, 2024ರ ಸೆಪ್ಟೆಂಬರ್‌ 6ರಂದು ಹೆಡ್‌ಕಾನ್‌ಸ್ಟೆಬಲ್ ಟಿ.ಎಸ್.ಮಂಜುನಾಥ್, ಗೃಹರಕ್ಷಕ ದಳದ ಸಿಬ್ಬಂದಿ ಮಲ್ಲಿಕಾರ್ಜುನ್ ಅವರು ನಿಯಂತ್ರಣ ಕೊಠಡಿಯಿಂದ ಕೀಯನ್ನು ತೆಗೆದುಕೊಂಡು ಬಂದು, ನನ್ನ ಅನುಮತಿ ಇಲ್ಲದೆ, ಕಚೇರಿಯ ಬಾಗಿಲು ತೆರೆದಿದ್ದರು. ಅಲ್ಲದೆ, ಮಲ್ಲಿಕಾರ್ಜುನ್ ಕೆಲವೊಂದು ಕಡತಗಳನ್ನು ನನ್ನ ಕಚೇರಿಯಲ್ಲಿ ಇರಿಸಿ, ಕಚೇರಿಯ ಫೋಟೊಗಳನ್ನು ತೆಗೆದು ರೂಪಾ ಅವರಿಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದರು’ ಎಂದು ವರ್ತಿಕಾ ದೂರಿನಲ್ಲಿ ವಿವರಿಸಿದ್ದರು. ಅದಾದ ಮೇಲೆ ವರ್ತಿಕಾ ಕಟಿಯಾರ್ ಅವರನ್ನು ಐಎಸ್‌ಡಿಯಿಂದ ಗೃಹರಕ್ಷಕ ದಳ ಹಾಗೂ ನಾಗರಿಕ ರಕ್ಷಣಾ ವಿಭಾಗದ ಡಿಐಜಿಯಾಗಿ ಸೋಮವಾರ ವರ್ಗಾವಣೆ ಮಾಡಲಾಗಿತ್ತು. 

ರೂಪಾ ಪತ್ರದಲ್ಲಿ ಏನಿದೆ?: ‘ವರ್ತಿಕಾ ಕಟಿಯಾರ್ ಅವರು ಕೆಲವು ಸುಳ್ಳು ಮತ್ತು ಆಧಾರ ರಹಿತ ಆರೋಪ ಮಾಡಿ ದೂರು ನೀಡಿದ್ದಾರೆ. ದೂರಿನ ಪ್ರತಿಯನ್ನು ಮಾಧ್ಯಮಗಳಿಗೂ ಸೋರಿಕೆ ಮಾಡಿದ್ದಾರೆ. ಈ ಮೂಲಕ ಅವರು ಶಿಸ್ತಿನ ಇಲಾಖೆಯಲ್ಲಿ ನಿಯಮ ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಪತ್ರದ ಮೂಲಕ ರೂಪಾ ಆಗ್ರಹಿಸಿದ್ದಾರೆ. 

‘ಕಾನ್‌ಸ್ಟೆಬಲ್‌ಗಳು ಕಡತವನ್ನು ತಮ್ಮ ಕೊಠಡಿಯಿಂದ ತೆಗೆದುಕೊಂಡು ಹೋಗಿದ್ದಾರೆ ಎಂದು ವರ್ತಿಕಾ ದೂರಿದ್ದಾರೆ. ಅವರ ಆರೋಪಕ್ಕೆ ಯಾವುದೇ ಪುರಾವೆ ಇಲ್ಲ. ಅವರ ಕೊಠಡಿ ಮತ್ತು ನನ್ನ ಕೊಠಡಿಯ ಮುಂದಿನ ಕಾರಿಡಾರ್‌ನಲ್ಲಿ ಕನಿಷ್ಠ 5 ಸಿ.ಸಿ.ಟಿ.ವಿ ಕ್ಯಾಮೆರಾಗಳಿವೆ. ಅವರು ಯಾವುದೇ ದೃಶ್ಯಾವಳಿಗಳನ್ನು ಲಗತ್ತಿಸಿಲ್ಲ’ ಎಂದು ರೂಪಾ ಅವರು ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

‘ಒಂದು ವೇಳೆ ಅಂತಹ ಘಟನೆ ನಡೆದಿದ್ದರೆ ಐಎಸ್‌ಡಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ಏಕೆ ತರಲಿಲ್ಲ? ಮಾನಹಾನಿ ಮಾಡುವ ಉದ್ದೇಶದಿಂದ ಸುಳ್ಳು ಆರೋಪ ಮಾಡಿದ್ದಾರೆ. ವರ್ತಿಕಾ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.