ADVERTISEMENT

ಅಣ್ಣಾಮಲೈ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 28 ಮೇ 2019, 9:02 IST
Last Updated 28 ಮೇ 2019, 9:02 IST
   

ಬೆಂಗಳೂರು: ಖಡಕ್ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ವದಂತಿ ಕುರಿತು ಮಂಗಳವಾರ ಬೆಳಿಗ್ಗೆ ಪ್ರತಿಕ್ರಿಯಿಸಿದ ಅವರು, ‘ಸಂಜೆಯೊಳಗೆ ನಿರ್ಧಾರ ತಿಳಿಸಲಾಗುವುದು’ ಎಂದು ಹೇಳಿದ್ದರು.

‘ಅಣ್ಣಾಮಲೈ ಅವರು ಸದ್ಯದಲ್ಲೇ ಗೃಹ ಇಲಾಖೆಯ ಕಾರ್ಯದರ್ಶಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆ’ ಎಂದು ಅವರ ಆಪ್ತ ಮೂಲಗಳು ‘ಪ್ರಜಾವಾಣಿ’ಗೆ ಸೋಮವಾರ ಖಚಿತಪಡಿಸಿದ್ದವು. ರಾಜೀನಾಮೆ ವದಂತಿ ಕುರಿತು ಮಂಗಳವಾರ ಬೆಳಿಗ್ಗೆ ಪ್ರತಿಕ್ರಿಯಿಸಿದ ಅವರು, ‘ಸಂಜೆಯೊಳಗೆ ನಿರ್ಧಾರ ತಿಳಿಸಲಾಗುವುದು’ ಎಂದು ಹೇಳಿದ್ದರು.

ADVERTISEMENT

ಇದೀಗ ರಾಜೀನಾಮೆ ನೀಡಿರುವ ಕುರಿತು ಅಣ್ಣಾಮಲೈ ಪತ್ರವೊಂದನ್ನು ಬಿಡುಗಡೆ ಮಾಡಿ ಅಧಿಕೃತ ಮಾಹಿತಿ ನೀಡಿದ್ದಾರೆ.

ಅಣ್ಣಾಮಲೈ ಪತ್ರದಲ್ಲೇನಿದೆ?

‘ನನ್ನೆಲ್ಲಪ್ರೀತಿಯ ಸ್ನೇಹಿತರು ಮತ್ತು ಶ್ರೇಯೋಭಿಲಾಷಿಗಳಿಗೆ,

ಎಲ್ಲರಿಗೂ ನನ್ನ ಶುಭಾಶಯಗಳು... ಕಳೆದ 2 ದಿನಗಳಿಂದಲೂ ನನ್ನ ರಾಜೀನಾಮೆ ಕುರಿತಾಗಿ ಎಲ್ಲೆಡೆ ಸುದ್ದಿ ಹರಿದಾಡ್ತಿದೆ. ಅದರ ಬಗ್ಗೆ ನಾನೊಂದು ಸ್ಪಷ್ಟನೆ ಕೊಡಲು ಬಯಸುತ್ತೇನೆ. ಈ ದಿನ ಅಂದರೆ 28ನೇ ಮೇ 2019 ನಾನು ಭಾರತೀಯ ಪೊಲೀಸ್ ಸೇವೆಗೆ ನನ್ನ ರಾಜೀನಾಮೆ ನೀಡಿದ್ದೇನೆ. ಅಂಗೀಕಾರ, ಪತ್ರ ವ್ಯವಹಾರ ಎಲ್ಲಾ ಪ್ರಕ್ರಿಯೆಗಳಿಗೂ ಕೆಲ ಕಾಲ ಸಮಯ ತೆಗೆದುಕೊಳ್ಳುತ್ತದೆ. ಕಳೆದ 6 ತಿಂಗಳಿನಿಂದಲೂ ನಾನು ಈ ಆಲೋಚನೆಯಲ್ಲಿದ್ದೆ. ಐಪಿಎಸ್‌ಗೆ ಆಯ್ಕೆಯಾಗಿ 9 ವರ್ಷಗಳೇ ಆಯ್ತು. ನಾನು ಆ 9 ವರ್ಷಗಳ ಪ್ರತಿಯೊಂದು ಕ್ಷಣದಲ್ಲೂ ಖಾಕಿ ಜೊತೆಯಲ್ಲೇ ಬದುಕಿದೆ. ಪೊಲೀಸ್ ಕೆಲಸಕ್ಕಿಂತ ಸರಿಸಮನಾದ ಮತ್ತೊಂದು ಕೆಲಸ ಇಲ್ಲ ಎಂದು ನಂಬಿದವನು ನಾನು. ಇದನ್ನ ನನ್ನ ಎಷ್ಟೋ ಮಂದಿ ಜೊತೆಗಾರರೊಂದಿಗೂ ಹಂಚಿಕೊಂಡಿದ್ದೇನೆ. ನನ್ನ ಪ್ರಕಾರ ಪೊಲೀಸ್ ಕೆಲಸ ದೇವರಿಗೆ ಬಹಳ ಹತ್ತಿರವಾದ ಕೆಲಸ. ಜೊತೆಗೆ ಹೆಚ್ಚು ಜವಾಬ್ದಾರಿಯುತ ಕೆಲಸ. ಈ ಕೆಲಸದಲ್ಲಿ ನಾನು ಸಾಕಷ್ಟು ಜನರ ಪ್ರೀತಿ ಗಳಿಸಿದ್ದೇನೆ. ಅಂತೆಯೇ ಸಾಕಷ್ಟು ವೈಯಕ್ತಿ ಸಭೆ, ಸಮಾರಂಭ, ಕುಟುಂಬದ ಕೆಲಸ ಕಾರ್ಯಗಳನ್ನೂ ಕಳೆದುಕೊಂಡಿದ್ದೇನೆ. ನಾನು ಇವತ್ತು ಈ ಮಟ್ಟಕ್ಕೆ ಬೆಳೆಯೋಕೆ ಸಹಕರಿಸಿದ ಹಲವರಿಗೆ ನಾನು ಏನೂ ಮಾಡಲು ಸಾಧ್ಯವಾಗಲಿಲ್ಲ. ಇದು ನನ್ನನ್ನು ಆಗ್ಗಾಗ್ಗೆ ಚಿಂತನೆಗೆ ಈಡು ಮಾಡಿದ್ದು ಸುಳ್ಳಲ್ಲ.

ಕಳೆದ ವರ್ಷ ನಾನು ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿ ಪಾಲ್ಗೊಂಡಿದ್ದೆ. ಆ ಯಾತ್ರೆ ನನ್ನ ಕಣ್ಣು ತೆರೆಸಿತು. ನನ್ನ ಮುಂದಿನ ಜೀವನದ ಬಗ್ಗೆ ಮಾರ್ಗದರ್ಶನ ಸಿಕ್ಕಿತು. ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿಯವರ ಸಾವು ನನ್ನನ್ನ ತೀವ್ರವಾಗಿ ಭಾಧಿಸಿತು. ಅಲ್ಲದೆ ಬದುಕಿನ ಮತ್ತೊಂದು ಆಯಾಮಕ್ಕೆ ಹೊರಳಲು, ನನ್ನ ಬದುಕನ್ನು ನಾನೇ ಓದಿಕೊಳ್ಳಲು ವೇದಿಕೆ ಸೃಷ್ಟಿಸಿತು. ಬದುಕಿನ ಎಲ್ಲಾ ಮಜಲುಗಳಿಗೂ ಒಂದು ಕೊನೆ ಇದ್ದೇ ಇದೆ. ನನ್ನ ಖಾಕಿ ಬದುಕಿನ ಕೆಲಸ ಮುಗಿದಿದೆ. ಹಾಗಂತ ನಾನು ನಿರ್ಧರಿಸಿದ್ದೇನೆ. ನಾನು ಲೋಕಸಭಾ ಚುನಾವಣೆಗೆ ಮೊದಲೇ ಈ ಬಗ್ಗೆ ನಿರ್ಧರಿಸಿದ್ದೆ. ಆದರೆ ಚುನಾವಣಾ ಸಮಯದಲ್ಲಿ ರಾಜೀನಾಮೆ ಕೊಟ್ಟು ಕರ್ತವ್ಯದಿಂದ ಹಿಂದೆ ಸರಿಯಲು ಮನಸ್ಸು ಒಪ್ಪಲಿಲ್ಲ. ನನ್ನ ವೃತ್ತಿ ಜೀವನದಲ್ಲಿ ಯಾರಿಗಾದರೂ ಯಾವುದಾದರೂ ತೊಂದರೆ ಆಗಿದ್ದರೆ ಅಥವಾ ಮನಃಸ್ತಾಪಗಳಿದ್ದರೆ ಅಂಥವರ ಬಳಿ ಕ್ಷಮೆ ಕೇಳುತ್ತೇನೆ.

ಜನರೆಲ್ಲ ಮುಂದೇನು ಅಂತ ಕೇಳುತ್ತಿದ್ದಾರೆ. ನಾನು ದೊಡ್ಡ ಮಟ್ಟಿನ ಯಾವುದೋ ಮಹತ್ವಾಕಾಂಕ್ಷೆ ಇಟ್ಟುಕೊಂಡಿಲ್ಲ. ನನಗೆ ಸ್ವಲ್ಪ ಸಮಯ ಬೇಕಿದೆ. ನನ್ನ ಜೀವನದ ಅತಿ ಚಿಕ್ಕ ಚಿಕ್ಕ ಘಟನೆಗಳು, ಚಿಕ್ಕ ಚಿಕ್ಕ ವಿಷಯಗಳನ್ನ ಸವಿಯಲು ನನಗೆ ಸಮಯ ಬೇಕಿದೆ. ನನ್ನ ಮಗನೊಟ್ಟಿಗೆ ಸಮಯ ಕಳೆಯಬೇಕಿದೆ. ಅವನ ಪ್ರತಿಯೊಂದು ಬೆಳವಣಿಗೆಗೂ ತಂದೆಯಾಗಿ ನಾನು ಸಮಯ ಕೊಡಬೇಕಿದೆ. ನಾನು ನನ್ನ ಕುಟುಂಬದತ್ತ ಹೊರಳಬೇಕಿದೆ. ಜೀವನ ಇನ್ನೂ ತುಂಬಾ ಇದೆ.

ವೃತ್ತಿ ಭಾಂಧವರನ್ನು ನಾನು ತುಂಬಾನೇ ಮಿಸ್ ಮಾಡ್ಕೊಂಡಿದ್ದೀನಿ. ಜೊತೆಗೆ ನನ್ನನ್ನು ಇಷ್ಟಪಟ್ಟ ಜನರನ್ನು ಕೂಡ. ಪ್ರಮುಖವಾಗಿ ಕಾರ್ಕಳ, ಉಡುಪಿ, ಚಿಕ್ಕಮಗಳೂರು ಮತ್ತು ಬೆಂಗಳೂರಿನ ಪ್ರಮುಖರನ್ನು. ನಾನು ನಿಮ್ಮೆಲ್ಲರ ಪ್ರೀತಿ ಮತ್ತು ನನ್ನ ಹಿರಿಯ ಅಧಿಕಾರಿಗಳ ಮಾರ್ಗದರ್ಶನಗಳನ್ನ ಮಿಸ್ ಮಾಡ್ಕೊತಿದೀನಿ. ನನ್ನೆಲ್ಲಾ ಕಾನ್‌ಸ್ಟೆಬಲ್‌ಗಳು, ಕಿರಿಯ ದರ್ಜೆಯ ಅಧಿಕಾರಿಗಳ ಶ್ರೇಯೋಭಿವೃದ್ಧಿಗೆ ನಾನು ಸಾಕಷ್ಟು ದುಡಿದಿದ್ದೇನೆ ಎಂಬ ಆತ್ಮತೃಪ್ತಿ ಇದೆ. ಅವರ ವೃತ್ತಿ ಬದುಕು ಮತ್ತು ದೈನಂದಿನ ಜೀವನ ಅವಶ್ಯವಾಗಿ ಇನ್ನೂ ಹೆಚ್ಚು ಬೆಳಗಬೇಕಿದೆ. ನನ್ನಿಂದ ಯಾರಿಗಾದ್ರೂ ಯಾವುದೇ ಸಮಯದಲ್ಲಾದರೂ ಮನಸ್ಸಿಗೆ ನೋವುಂಟಾಗಿದ್ದರೆ ನನ್ನನ್ನು ಕ್ಷಮಿಸಿ.

ನಿಮ್ಮೆಲ್ಲರನ್ನೂ ಮುಖ್ಯವಾಗಿ ನಿಮ್ಮ ಪ್ರೀತಿ- ವಿಶ್ವಾಸಗಳನ್ನು ನಾನು ಖಂಡಿತವಾಗಿಯೂ ಮಿಸ್ ಮಾಡ್ಕೋತಿದ್ದೇನೆ.
ತುಂಬು ಪ್ರೀತಿಯಿಂದ,
– ಕೆ. ಅಣ್ಣಾಮಲೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.