ADVERTISEMENT

ನೇಮಕಾತಿಗಳಲ್ಲಿ ಅಕ್ರಮ l ರಾಜಭವನ ಮುತ್ತಿಗೆಗೆ ಅಭ್ಯರ್ಥಿಗಳ ಯತ್ನ

ಒಕ್ಕೂಟದ ವತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 22:20 IST
Last Updated 19 ಆಗಸ್ಟ್ 2022, 22:20 IST
ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿಗಳ ಒಕ್ಕೂಟದ ಸದಸ್ಯರು ಶುಕ್ರವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಮಾಡಿದರು –ಪ್ರಜಾವಾಣಿ ಚಿತ್ರ
ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿಗಳ ಒಕ್ಕೂಟದ ಸದಸ್ಯರು ಶುಕ್ರವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಮಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು:‘ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ಹೆಚ್ಚಾಗಿದ್ದು, ಲಕ್ಷಾಂತರ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿ ರಾಜಭವನಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ರಾಜ್ಯ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳ ಒಕ್ಕೂಟದ 35 ಪದಾಧಿಕಾರಿಗಳನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದರು. ಮುಚ್ಚಳಿಕೆ ಬರೆಸಿಕೊಂಡು ಸಂಜೆ ಬಿಡುಗಡೆ ಮಾಡಿದರು.

ರಾಜಭವನ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲು ಹಲವು ದಿನಗಳ ಹಿಂದೆಯೇ ತೀರ್ಮಾನಿಸಿದ್ದ ಪದಾಧಿಕಾರಿಗಳು, ಶುಕ್ರವಾರ ಬೆಳಿಗ್ಗೆಯೇ ಸ್ವಾತಂತ್ರ್ಯ ಉದ್ಯಾನ ಬಳಿ ಬರಲು ಅಭ್ಯರ್ಥಿಗಳಿಗೆ ತಿಳಿಸಿದ್ದರು. ಆದರೆ, ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿರುವ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನೀಡಿರಲಿಲ್ಲ.

ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಪದಾಧಿಕಾರಿಗಳು, ಉದ್ಯಾನದಲ್ಲಿ ಪ್ರತಿಭಟನೆ ಮಾಡುವುದಾಗಿ ಘೋಷಿಸಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು, ಶುಕ್ರವಾರ ಬೆಳಿಗ್ಗೆಯೇ ಕೆಲ ಪದಾಧಿಕಾರಿಗಳನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಕೂರಿಸಿದ್ದರು. ಹಂಪಿನಗರದಲ್ಲೂ ಕೆಲ ಅಭ್ಯರ್ಥಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಪೊಲೀಸರ ಈ ವರ್ತನೆಗೆ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಉದ್ಯಾನದಲ್ಲಿ ಪ್ರತಿಭಟನೆ: ಕೆಲ ಪದಾಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದರೂ ಹೆದರದ ಅಭ್ಯರ್ಥಿಗಳು, ನಿಗದಿಯಂತೆ ಸ್ವಾತಂತ್ರ್ಯ ಉದ್ಯಾನಕ್ಕೆ ಬಂದು ಪ್ರತಿಭಟನೆ ಆರಂಭಿಸಿದರು.

‘ಕೆಪಿಎಸ್‌ಸಿ, ಕೆಎಸ್‌ಪಿ ಹಾಗೂ ಕೆಇಎ ಸೇರಿದಂತೆ ಹಲವು ಸಂಸ್ಥೆಗಳ ಮೂಲಕ ನಡೆಯುತ್ತಿರುವ ನೇಮಕಾತಿಗಳು ಪಾರದರ್ಶಕವಾಗಿ ನಡೆಯುತ್ತಿಲ್ಲ. ಈ ಸಂಸ್ಥೆಗಳು ಅಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಸಹಾಯಕ ಪ್ರಾಧ್ಯಾಪಕರು, ಕೆಪಿಟಿಸಿಎಲ್‌, ಪಿಎಸ್‌ಐ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಈಗಾಗಲೇ ಬಯಲಾಗಿದೆ’ ಎಂದು ಅಭ್ಯರ್ಥಿಗಳು ಆರೋಪಿಸಿದರು.

‘ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆ ತರಲೆಂದು ಯುಪಿಎಸ್‌ಸಿ ನಿವೃತ್ತ ಅಧ್ಯಕ್ಷ ಪಿ.ಸಿ. ಹೋಟಾ ನೇತೃತ್ವದ ಸಮಿತಿ ನೀಡಿದ್ದ ಶಿಫಾರಸುಗಳನ್ನು ಜಾರಿಗೆ ತರಬೇಕು. ಶಿಕ್ಷಣ ಸಚಿವರ ಅಧೀನದ ಕೆಇಎ ಮುಚ್ಚಬೇಕು. ಅದರ ಜವಾಬ್ದಾರಿಗಳನ್ನು ಕೆಪಿಎಸ್‌ಸಿಗೆ ವಹಿಸಬೇಕು’ ಎಂದೂ ಆಗ್ರಹಿಸಿದರು.

ಪ್ರತಿಭಟನೆ ಬಳಿಕ ಅಭ್ಯರ್ಥಿಗಳು, ರಾಜಭವನಕ್ಕೆ ಮುತ್ತಿಗೆ ಹಾಕಲು ಜಾಥಾದಲ್ಲಿ ಹೊರಟಿದ್ದರು. ಮಾರ್ಗಮಧ್ಯೆಯೇ ಅವರನ್ನು ತಡೆದ ಪೊಲೀಸರು, ವಶಕ್ಕೆ ಪಡೆದು ವಾಹನಗಳಲ್ಲಿ ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.