ADVERTISEMENT

ಮುಂದಿನ 30 ವರ್ಷಗಳಿಗಾಗಿ ನೀರಾವರಿ ಯೋಜನೆ ಸಿದ್ಧತೆ: ರಮೇಶ್ ಜಾರಕಿಹೊಳಿ

ರಾಜ್ಯ ನೀರಾವರಿ ಆಯೋಗ ಸ್ಥಾಪನೆ ಕುರಿತು ಮುಖ್ಯಮಂತ್ರಿ ಜೊತೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 9:02 IST
Last Updated 16 ಏಪ್ರಿಲ್ 2020, 9:02 IST
ಸಚಿವ ರಮೇಶ್ ಜಾರಕಿಹೊಳಿ
ಸಚಿವ ರಮೇಶ್ ಜಾರಕಿಹೊಳಿ   

ಬೆಂಗಳೂರು: ಮುಂದಿನ 30 ವರ್ಷಗಳ ನೀರಾವರಿ ‌ಯೋಜನೆಗಳ ಅನುಷ್ಠಾನದ ಉದ್ದೇಶದಿಂದ ಕರ್ನಾಟಕ ರಾಜ್ಯ ನೀರಾವರಿ ಆಯೋಗ ಸ್ಥಾಪನೆ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುವುದಾಗಿ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ನಿವೃತ್ತ ಕಾರ್ಯದರ್ಶಿ ಕ್ಯಾ. ರಾಜಾರಾವ್ ಅವರೊಂದಿಗೆ ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗಳ ಕುರಿತು ಚರ್ಚಿಸಿದ ನಂತರ‌ ಮಾತನಾಡಿದ ಸಚಿವರು, ಕುಡಿಯುವ ನೀರು, ಅಂತರ್ಜಲ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ನೀರಿನ ಬಳಕೆ ಕುರಿತಂತೆ ದೂರದೃಷ್ಟಿಯ ನೀಲನಕ್ಷೆ ಸಿದ್ದಪಡಿಸಲಾಗುವುದು. ಮುಂದಿನ‌ ಮಳೆಗಾಲದಲ್ಲಿ ಅತಿವೃಷ್ಠಿ ತಡೆಗೆ ವ್ಯಾಪಕ‌ ಕ್ರಮ ಕೈಗೊಳ್ಳಲಾಗಿದೆ. ನಮ್ಮ ನೀರನ್ನು‌ ಉಳಿಸಿಕೊಂಡು ಯೋಜನೆಗಳನ್ನು‌ ಪ್ರಾರಂಭಿಸುತ್ತೇವೆ ಎಂದರು.

ನೀರಿನ‌ ಸದ್ಬಳಕೆಗೆ ಅಂತರ ರಾಜ್ಯ ನದಿ ಜೋಡಣೆ ಮಾಡಬೇಕಾದ ಅಗತ್ಯವಿದೆ. ಇದರಿಂದ ರಾಜ್ಯದ ನೀರಿನ‌ ಪಾಲು ಕೂಡಾ ಹೆಚ್ಚಾಗಲಿದೆ. ಹಾಗಾಗಿ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಈ‌ ಕುರಿತು ಚರ್ಚಿಸಲಾಗುವುದು ಎಂದು‌ ಜಲಸಂಪನ್ಮೂಲ ಸಚಿವರು ತಿಳಿಸಿದರು.

ADVERTISEMENT

ಹನಿ ನೀರಾವರಿ ಯೋಜನೆಗಳ ಅನುಷ್ಠಾನ ಕುರಿತು ವಿಸ್ತೃತ ನೀತಿ ರೂಪಿಸುತ್ತೇವೆ. ದೊಡ್ಡ ಮಟ್ಟದ ಏತ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸರ್ಕಾರ, ನೀತಿಯನ್ನು ರೂಪಿಸಬೇಕಾಗಿದ್ದು ಈ ಕುರಿತಂತೆ ಇಲಾಖೆಯ ಮಟ್ಟದಲ್ಲಿ ಚರ್ಚೆ ಮಾಡಿ ಶೀಘ್ರವಾಗಿ ತೀರ್ಮಾನವನ್ನು ಕೈಗೊಳ್ಳಲಾಗುವುದೆಂದು ಸಚಿವರು ತಿಳಿಸಿದರು.
ಕೃಷ್ಣ ನದಿ ನೀರಿನ ಸದ್ಬಳಕೆ ಗಾಗಿ ಕೂಡಲೇ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಮನವಿ‌ ಮಾಡಲಾಗಿದೆ.

ಈ‌ ಕುರಿತಂತೆ ನವದೆಹಲಿಗೆ ತೆರಳಿ ಕೇಂದ್ರದ ಜಲಶಕ್ತಿ ಸಚಿವರೊಂದಿಗೆ ಈ‌ ಕುರಿತು ಮಾತನಾಡಿ ಕೂಡಲೇ ಅಧಿಸೂಚನೆ ಹೊರಡಿಸಲು‌ ಮನವಿ‌ ಮಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.