
‘ನೀರಿನ ಹೆಜ್ಜೆ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪರಸ್ಪರ ಚರ್ಚೆಯಲ್ಲಿ ತೊಡಗಿದ್ದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಮಹಾದಾಯಿ, ಕೃಷ್ಣಾ ಮೇಲ್ದಂಡೆ, ಕಳಸಾ–ಬಂಡೂರಿ... ರಾಜ್ಯದ ಈ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ನಿಜಕ್ಕೂ ತೊಡಕಾಗಿರುವುದು ಕೇಂದ್ರ ಸರ್ಕಾರ. ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಿರುವ ಅಧಿಸೂಚನೆ, ಪರಿಸರ ಮತ್ತು ಅರಣ್ಯ ಅನುಮತಿಗಳನ್ನು ನೀಡದೆ, ಕೇಂದ್ರ ಸರ್ಕಾರವು ಅನ್ಯಾಯ ಮಾಡುತ್ತಿದೆ ಅದನ್ನು ಪ್ರಶ್ನಿಸದೆ ರಾಜ್ಯದ ಸಂಸದರು ಸುಮ್ಮನೆ ಕೂತಿದ್ದಾರೆ’ ಎಂಬ ಟೀಕೆಗೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ‘ನೀರಿನ ಹೆಜ್ಜೆ’ ಪುಸ್ತಕ ಜನಾರ್ಪಣೆ ಕಾರ್ಯಕ್ರಮವು ವೇದಿಕೆಯಾಯಿತು.
ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಕುರಿತು ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ, ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರೂ, ‘ಕೇಂದ್ರವು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ’ ಎಂದು ಒತ್ತಿ ಒತ್ತಿ ಹೇಳಿದರು.
‘ಹಂಚಿಕೆಯಾದ ನೀರೂ ಬಳಕೆಗೆ ಸಿಗುತ್ತಿಲ್ಲ’
‘ರಾಜ್ಯದಲ್ಲಿ 3400 ಟಿಎಂಸಿ ಅಡಿಗಳಷ್ಟು ನೀರು ದೊರಕುತ್ತದೆ. ಇದರಲ್ಲಿ ನಮಗೆ 1250 ಟಿಎಂಸಿ ಅಡಿಯಷ್ಟು ಹಂಚಿಕೆಯಾಗಿದೆ. ಕೇಂದ್ರ ಸರ್ಕಾರದ ಅಡ್ಡಗಾಲಿನಿಂದಾಗಿ ನಮ್ಮ ಪಾಲಿಗೆ ಹಂಚಿಕೆಯಾಗಿರುವ ನೀರನ್ನೂ ಬಳಸಿಕೊಳ್ಳಲು ಆಗುತ್ತಿಲ್ಲ. ಇದರ ವಿರುದ್ಧ ಬಿಜೆಪಿ ಸಂಸದರು ಮಾತನಾಡುವುದಿಲ್ಲ. ತಾವು ಜಲ ಸಂರಕ್ಷಕರು ಎಂದು ಬಾಯಿಬಡಿದುಕೊಳ್ಳುವ ಜೆಡಿಎಸ್ ಸಂಸದರೂ ಈ ವಿಚಾರದಲ್ಲಿ ಬಾಯಿ ಬಿಡುವುದಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು. ‘ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್‌ನ ಮುದ್ರೆ ಬಿದ್ದಿದೆ. ಆದರೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಮತ್ತು ಕೇಂದ್ರ ಜಲ ಆಯೋಗಗಳು ಯೋಜನೆಗೆ ಒಪ್ಪಿಗೆ ನೀಡಬೇಕು. ಅರಣ್ಯ ಮತ್ತು ಪರಿಸರ ಅನುಮತಿ ನೀಡಬೇಕು. ಇದೆಲ್ಲವೂ ಕೇಂದ್ರ ಸರ್ಕಾರದ ಕೈಯಲ್ಲಿದೆ. ಅದಕ್ಕಿನ್ನೆಷ್ಟು ವಿಳಂಬ ಮಾಡುತ್ತದೆಯೋ’ ಎಂದು ಕಳವಳ ವ್ಯಕ್ತಪಡಿಸಿದರು. ‘ಶಿವಕುಮಾರ್ ಸಚಿವರಾಗಿದ್ದಾಗಲೇ ಅನುಷ್ಠಾನವಾಗಲಿ’: ‘ಈ ಯೋಜನೆಗೆ ಅಗತ್ಯ ಒಪ್ಪಿಗೆ ಮತ್ತು ಅನುಮತಿಗಳನ್ನು ಕೊಡಿಸುವ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್ ಸಂಸದರು ಮಾಡಲಿ. ಡಿ.ಕೆ.ಶಿವಕುಮಾರ್ ಅವರು ನೀರಾವರಿ ಸಚಿವರಾಗಿರುವಾಗಲೇ ಈ ಯೋಜನೆ ಅನುಷ್ಠಾನವಾಗಲಿ. ನಾವು ಒಳ್ಳೆಯ ಕೆಲಸ ಮಾಡಿದ್ದೇವೆ. 2028ರಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದರು.
‘ನಮ್ಮ ನೀರಿನ ಹಕ್ಕಿನ ನಿರಾಕರಣ’
‘ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಲ್ಲಿ ನಮಗೆ ನೀರು ಹಂಚಿಕೆಯಾಗಿ ಹತ್ತು ವರ್ಷ ಕಳೆದಿದೆ. ಆದರೆ ಕೇಂದ್ರ ಸರ್ಕಾರವು ಈ ಸಂಬಂಧ ಅಧಿಸೂಚನೆ ಹೊರಡಿಸದೆ ನಮ್ಮ ಪಾಲಿನ ನೀರನ್ನು ನಿರಾಕರಿಸುತ್ತಿದೆ. ಇದನ್ನು ಬಿಜೆಪಿ ಮತ್ತು ಜೆಡಿಎಸ್ ಸಂಸದರು ರಾಜ್ಯದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವವರು ಏಕೆ ಪ್ರಶ್ನಿಸುತ್ತಿಲ್ಲ’ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. ‘ಗೋವಾದ ಒಬ್ಬ ಸಂಸದ ಮಹದಾಯಿ ಯೋಜನೆಯನ್ನು ತಡೆದು ನಿಲ್ಲಿಸಿದ್ದಾರೆ. ನಮ್ಮ ರಾಜ್ಯದಲ್ಲಿ 28 ಸಂಸದರಿದ್ದೇವೆ. 19 ಮಂದಿ ಕೇಂದ್ರದ ಆಡಳಿತ ಪಕ್ಷದವರೇ ಇದ್ದಾರೆ. ಅಷ್ಟು ಜನ ಸಂಸದರಿದ್ದೂ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಯಾರೊಬ್ಬರೂ ಸಂಸತ್ತಿನಲ್ಲಿ ಮಾತನಾಡಿಲ್ಲ’ ಎಂದರು. ‘ಬೊಮ್ಮಾಯಿ ಅವರನ್ನು ಈ ಕಾರ್ಯಕ್ರಮಕ್ಕೆ ಕರೆದಿದ್ದೆ. ಈ ಪುಸ್ತಕದಲ್ಲಿ ತಮ್ಮ ವಿರುದ್ಧ ಬರಹವಿದ್ದು ಬಂದರೆ ಮುಜುಗರವಾಗುತ್ತದೆ ಎಂದು ತಿಳಿಸಿದರು. ಅದು ಅವರ ಅಸಹಾಯಕತೆ. ಅವರು ರಾಜ್ಯದ ನೀರಾವರಿಗಾಗಿ ಏನೂ ಮಾಡಿಲ್ಲ ಎಂಬ ಸತ್ಯವನ್ನು ನಾನು ಹೇಳಲೇಬೇಕಲ್ಲವೇ’ ಎಂದು ಪ್ರಶ್ನಿಸಿದರು.
‘ಮತ್ತೆ ವಿಳಂಬವಾಗದಿರಲಿ’
‘ರಾಜ್ಯದ ಬಹುತೇಕ ನೀರಾವರಿ ಯೋಜನೆಗಳು ರಾಜಕೀಯ ಇಚ್ಛಾಶಕ್ತಿಯ ಕಾರಣಕ್ಕೆ ವಿಳಂಬವಾಗಿದ್ದವು. ಆದರೆ ಹತ್ತು–ಹನ್ನೆರಡು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಕಾರಣಕ್ಕೆ ವಿಳಂಬವಾಗುತ್ತಿದೆ. ಇದರಿಂದ ರಾಜ್ಯದ ಜನರಿಗೆ ಅನ್ಯಾಯವಾಗುತ್ತಿದೆ. ಈಗ ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಆದರೆ ಅದೂ ವಿಳಂಬವಾಗದಿರಲಿ’ ಎಂದು ಎಚ್.ಕೆ.ಪಾಟೀಲ ಹೇಳಿದರು. ‘ವರದಿಗಾರಿಕೆಯಲ್ಲಿ ಎಚ್ಚರಿಕೆ ಅಗತ್ಯ’: ‘ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಎಚ್ಚರಿಕೆಯಿಂದ ವರದಿ ಮಾಡಬೇಕು. ಪಾಕಿಸ್ತಾನದ ವಿರುದ್ಧ ಜಲಾಶಯದ ನೀರನ್ನು ಬಳಸಿಕೊಳ್ಳುತ್ತೇವೆ ಎಂಬಂತಹ ವರದಿಗಳಿಂದ ಭಾರತಕ್ಕೇ ಹಾನಿಯಾಗುತ್ತದೆ. ಬ್ರಹ್ಮಪುತ್ರ ನದಿಗೆ ಚೀನಾವು ಜಗತ್ತಿನ ಅತ್ಯಂತ ದೊಡ್ಡ ಅಣೆಕಟ್ಟು ನಿರ್ಮಿಸುತ್ತಿದೆ. ಅದರಿಂದ ಭಾರತದ ಮೇಲಾಗುವ ಪರಿಣಾಮಗಳೇನು ಎಂಬುದರ ಬಗ್ಗೆಯೂ ಈ ಪುಸ್ತಕದಲ್ಲಿ ವಿವರಗಳಿವೆ’ ಎಂದು ಸುಪ್ರೀಂ ಕೋರ್ಟ್‌ನ ಪದಾಂಕಿತ ಹಿರಿಯ ವಕೀಲ ಮೋಹನ್ ಕಾತರಕಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.