ADVERTISEMENT

ಕೃಷ್ಣ, ಮೇಕೆದಾಟು ಯೋಜನೆ ಜಾರಿಗೆ ತರದಿದ್ದರೆ ಜೆಡಿಎಸ್ ವಿಸರ್ಜನೆ: ಕುಮಾರಸ್ವಾಮಿ

ಜೆಡಿಎಸ್ ಅಧಿಕಾರಕ್ಕೆ ಬಂದ ಐದು ವರ್ಷಗಳಲ್ಲಿ...

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 9:36 IST
Last Updated 9 ಏಪ್ರಿಲ್ 2022, 9:36 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ರಾಮನಗರ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆಬಂದ ಐದು ವರ್ಷಗಳಲ್ಲಿ ಕೃಷ್ಣ , ಮೇಕೆದಾಟು ಯೋಜನೆ ಜಾರಿಗೆ ತರದೇ ಹೋದರೆ ಜೆಡಿಎಸ್ ವಿಸರ್ಜಿಸುತ್ತೇನೆ ಎಂದು ಪಕ್ಷದ ಶಾಸಕಾಂಗ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಶನಿವಾರ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕನಿಷ್ಠ 4-5 ಲಕ್ಷ ಕೋಟಿ ರೂಪಾಯಿ ಬೇಕಿದೆ ಎಂದರು.

ಇನ್ನೂ ನೂರು ವರ್ಷ ಕಾಂಗ್ರೆಸ್ - ಬಿಜೆಪಿ ದೇಶ ಆಳಿದರೂ ಮೇಕೆದಾಟು ಯೋಜನೆಗೆ ಚಾಲನೆ ನೀಡುವುದಿಲ್ಲ. ಈಗಾಗಲೇ ಯೋಜನೆ ವೆಚ್ಚ 12 ಸಾವಿರ ಕೋಟಿ ವೆಚ್ಚಕ್ಕೆ ಏರಿಕೆ ಆಗಿದೆ. ಯೋಜನೆಗೆ ಚಾಲನೆ ನೀಡುವ ವೇಳೆಗೆ ವೆಚ್ಚ 20 ಸಾವಿರ ಕೋಟಿ ರೂಪಾಯಿಗೆ ಏರಿಕೆ ಆಗಬಹುದು ಎಂದರು.

ADVERTISEMENT

ಮುಸ್ಲಿಮರ ವಿರುದ್ಧ ಇದೀಗ ಟ್ಯಾಕ್ಸಿ , ಆಟೋ ಏರಬಾರದು ಎಂದು ಹೊಸತಾಗಿ ಅಭಿಯಾನ ಶುರುವಾಗಿದೆ. ಇದು ಎಲ್ಲಿಗೆ ಮುಟ್ಟುತ್ತದೆಯೋ ಗೊತ್ತಿಲ್ಲ. ಸರ್ವ ಜನಾಂಗದ ಶಾಂತಿಯ ತೋಟ ಹೊತ್ತಿ ಉರಿಯುತ್ತಿದೆ. ಇಡೀ ಹಿಂದು- ಮುಸ್ಲಿಂ ಸಮುದಾಯದ ನಡುವೆ ಬಿರುಕು ಮೂಡಿಸುವ ಪ್ರಯತ್ನ ನಡೆದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಿತೂರಿಯಿಂದ ಮುಸ್ಲಿಮರು ಜೆಡಿಎಸ್ ಗೆ ಹೆಚ್ಚು ಮತ ಹಾಕಲಿಲ್ಲ. ಇದರಿಂದ ನಾವು 38 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡೆವು. ಇಲ್ಲದಿದ್ದರೆ ಕನಿಷ್ಠ 70 ಸ್ಥಾನ‌ ಗೆಲ್ಲುತ್ತಿದ್ದೆವು ಎಂದರು.

ಇದೇ 12ರ‌ಂದು ರಾಮನಗರದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಜಲಧಾರೆ ವಾಹನಗಳಿಗೆ ಚಾಲನೆ ನೀಡಲಾಗುವುದು. ಇದೇ 16 ರಿಂದ ರಾಜ್ಯದಾದ್ಯಂತ ಜಲಧಾರೆ ಯಾತ್ರೆ ಆರಂಭಗೊಳ್ಳಲಿದೆ ಎಂದರು.

ಇದೇ ವೇಳೆ, ಶಾಸಕ ಎ. ಮಂಜುನಾಥ್ ಅವರನ್ನು ಜೆಡಿಎಸ್ ನ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಅವರು ಘೋಷಣೆ ಮಾಡಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.