ADVERTISEMENT

ಮೋದಿ ಪ್ರಧಾನಿ ಆದ ಮೇಲೆ ಅಂಬಾನಿ, ಅದಾನಿ ಶ್ರೀಮಂತರಾದರೇ? ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 15:02 IST
Last Updated 27 ಸೆಪ್ಟೆಂಬರ್ 2021, 15:02 IST
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ    

ಬೆಂಗಳೂರು: ‘ನಮ್ಮ ಸರ್ಕಾರ ಮತ್ತು ಯೋಜನೆಗಳು ಅದಾನಿ, ಅಂಬಾನಿ ಪರ ಇಲ್ಲ. ರೈತರು, ಕೃಷಿ ಕಾರ್ಮಿಕರು ಮತ್ತು ಬಡವರ ಪರವಾದ ಯೋಜನೆಗಳನ್ನೇ ಹಮ್ಮಿಕೊಂಡಿದ್ದೇವೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

‘ಅಂಬಾನಿ, ಅದಾನಿ ನಿನ್ನೆ– ಮೊನ್ನೆ ಹುಟ್ಟಿದವರೇ? ಮೋದಿಯವರು ಪ್ರಧಾನಿ ಆದ ಮೇಲೆ ಶ್ರೀಮಂತರಾದರೇ, ಕಾಂಗ್ರೆಸ್‌ ಕಾಲದಲ್ಲೇ ಹುಟ್ಟಿ, ಶ್ರೀಮಂತರಾದವರಲ್ಲವೇ’ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಕೃಷಿ ಮಸೂದೆ ನೆಪದಲ್ಲಿ ಈಗ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತ. ಪಟ್ಟಭದ್ರ ಹಿತಾಸಕ್ತಿಗಳ, ಅರಾಜಕತೆ ಸೃಷ್ಟಿಸುವ ಬಿಜೆಪಿ ವಿರೋಧಿಗಳ ಷಡ್ಯಂತ್ರದ ಭಾಗ. 19 ಕ್ಕೂ ಹೆಚ್ಚು ರಾಜಕೀಯ ಪಕ್ಷಗಳ, 100ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ನಿರೀಕ್ಷಿತ ಪ್ರಮಾಣದಲ್ಲಿ ರೈತರ ಬೆಂಬಲ ಸಿಕ್ಕಿಲ್ಲ. ಪ್ರಧಾನಿ ಮೋದಿಯವರ ಕೃಷಿ ಸುಧಾರಣಾ ಕ್ರಮಕ್ಕೆ ರೈತರು ಬೆಂಬಲವಾಗಿ ನಿಂತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಬಿಜೆಪಿಯನ್ನು ರೈತ ವಿರೋಧಿ ಎಂದು ಬಿಂಬಿಸುವ ಷಡ್ಯಂತ್ರ ನಡೆದಿದೆ. ಬಿಜೆಪಿಯನ್ನು ದಲಿತ ವಿರೋಧಿ ಎಂದು ಬಿಂಬಿಸಲು ಹೊರಟು ಸೋತರು. ಅಸಹಿಷ್ಣುತೆ ಹೆಸರಿನಲ್ಲಿ ಅರಾಜಕತೆ ಸೃಷ್ಟಿಗೂ ಮುಂದಾದರು. ಪ್ರಶಸ್ತಿಗಳ ವಾಪಸ್‌ ನಾಟಕವೂ ನಡೆಯಿತು. ಸಿಎಎ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸುವ ಯತ್ನವೂ ನಡೆಯಿತು. ಕೃಷಿ ಎಂದರೆ ಏನೆಂದೇ ತಿಳಿಯದವರೂ ಈ ಮಸೂದೆಗಳ ವಿರುದ್ಧ ಚಳವಳಿಗೆ ಇಳಿದಿದ್ದನ್ನೂ ಕಂಡಿದ್ದೇವೆ’ ಎಂದರು.

‘ಯುಪಿಎ 10 ವರ್ಷಗಳ ಕಾಲದಲ್ಲಿ ಕಿಸಾನ್ ಸಮ್ಮಾನ್‌ ಯೋಜನೆ ಇತ್ತಾ, ಫಸಲ್‌ ಬಿಮಾ ಯೋಜನೆ ಇತ್ತಾ, ರಸಗೊಬ್ಬರಕ್ಕೆ ₹1,700 ಸಬ್ಸಿಡಿ ನೀಡಿತ್ತಾ’ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ ರವಿ, ‘ಸಂಸತ್ತಿನಲ್ಲಿ ಚರ್ಚೆ ಮಾಡಲಾಗದೇ ಕಾಂಗ್ರೆಸ್‌ ಪಲಾಯನ ಮಾಡಿತು. ಬ್ರಿಟಿಷ್‌ ಯುಗದ ಕಾಯ್ದೆಗಳಿಂದ ರೈತರಿಗೆ ನಮ್ಮ ಸರ್ಕಾರ ಬಿಡುಗಡೆ ಭಾಗ್ಯ ನೀಡುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.