ADVERTISEMENT

ಪೋಸ್ಟರ್‌ ಅಂಟಿಸುವುದು ಶೂರತನದ ಕೆಲಸವೇ?: ಬೊಮ್ಮಾಯಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 14:57 IST
Last Updated 25 ಸೆಪ್ಟೆಂಬರ್ 2022, 14:57 IST
ಬೊಮ್ಮಾಯಿ
ಬೊಮ್ಮಾಯಿ   

ಮೈಸೂರು: ‘ಟೀಕೆಗಳೇ ನನಗೆ ಟಾನಿಕ್. ನನ್ನ ಆತ್ಮಸ್ಥೈರ್ಯ ಮತ್ತು ಸಂಕಲ್ಪವನ್ನು ಹೆಚ್ಚಿಸುವ ಅವುಗಳನ್ನು ‌ಸ್ವಾಗತಿಸುತ್ತೇನೆ. ವಿರೋಧವನ್ನು ಮೆಟ್ಟಿಲಾಗಿಸಿಕೊಂಡು ಗುರಿಯ ಕಡೆಗೆ ಹೋಗುತ್ತೇನೆ. ಹೇಡಿಗಳು ಮಾಡುವ ಕೆಲಸಕ್ಕೆ ಹೆದರುವುದಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡುಗಿದರು.

ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ಉದ್ಯಾನದಲ್ಲಿ ಭಾನುವಾರ ಆಯೋಜಿಸಿದ್ದ ‘ಮೋದಿ ಯುಗ ಉತ್ಸವ’ದ ಸಮಾರೋಪ ಹಾಗೂ ₹ 181.56 ಕೋಟಿ ಮೊತ್ತದಲ್ಲಿ ಕೈಗೊಂಡಿರುವ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವುದು ಯಾವ ಶೂರತನದ ಕೆಲಸ?’ ಎಂದು ಕಾಂಗ್ರೆಸ್‌ನವರ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

‘ದೇಶ ಹಾಗೂ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ’ ಎಂದರು.

ದುಡ್ಡು ಪಡೆಯುವ ಮಧ್ಯವರ್ತಿಗಳಿದ್ದಾರೆ:

‘ಸರ್ಕಾರದ ಸೌಲಭ್ಯ ಕೊಡಿಸುವುದಾಗಿ ದುಡ್ಡು ಪಡೆಯುವ ಮಧ್ಯವರ್ತಿಗಳಿದ್ದಾರೆ. ಆದರೆ, ಕೃಷ್ಣರಾಜ ಕ್ಷೇತ್ರದಲ್ಲಿ ಶಾಸಕ ರಾಮದಾಸ್ ನೇರವಾಗಿ 70ಸಾವಿರ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸುತ್ತಿರುವುದು ದಾಖಲೆಯೇ ಸರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸರ್ಕಾರದಿಂದ ಬಿಡುಗಡೆಯಾಗುವ ಹಣವನ್ನು ಮಧ್ಯದಲ್ಲಿಯೇ ತಿಂದು ಹಾಕುವ ಸಂಸ್ಕೃತಿ‌ ಇತ್ತು. ಅದನ್ನೇ ಹಿಂದಿನ ಒಬ್ಬ ಪ್ರಧಾನಿ ಹೇಳಿದ್ದರು. ಮಧ್ಯವರ್ತಿಗಳಿರುವ ರಾಜಕೀಯ ವ್ಯವಸ್ಥೆ ಈಗಲೂ ಇದೆ. ಅದನ್ನು ಹೋಗಲಾಡಿಸುವುದಕ್ಕಾಗಿಯೇ ಮೋದಿ ಡಿಜಿಟೈಸ್‌ ಮಾಡುತ್ತಿದ್ದಾರೆ. ನೇರ ನಗದು ವರ್ಗಾವಣೆ ಮೂಲಕ ಎಲ್ಲ ಯೋಜನೆಗಳ ಲಾಭವನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುತ್ತಿದ್ದಾರೆ’ ಎಂದರು.

ಮೈಸೂರಿನ ಪರಂಪರೆ ಉಳಿಸಬೇಕು:

‘ಘೋಷಣೆಯಿಂದ ಬಡತನ‌ ನಿರ್ಮೂಲನೆ ಆಗುವುದಿಲ್ಲ. ಸಾಮಾಜಿಕ ನ್ಯಾಯ ಸಿಗುವುದಿಲ್ಲ. ಕಾಂಗ್ರೆಸ್‌ ಸರ್ಕಾರದಿಂದ ಜನರ ಬಡತನದಿಂದ ದೂರಾಗಲಿಲ್ಲ‌. ಘೋಷಣೆ ಮಾಡಿದವರ ಬಡತನವಷ್ಟೆ ನಿರ್ಮೂಲನೆಯಾಯಿತು’ ಎಂದು ಟೀಕಿಸಿದರು.

‘ಮೈಸೂರಿನ ಪರಂಪರೆಯನ್ನು ಉಳಿಸಿ-ಬೆಳೆಸಿಕೊಂಡು‌ ಹೋಗಬೇಕು. ಇದಕ್ಕೆ ನಮ್ಮ ಸರ್ಕಾರ ಒತ್ತು ಕೊಟ್ಟಿದೆ’ ಎಂದು ತಿಳಿಸಿದರು.

‘ಜನರಿಗೆ ಒಳಿತು ಮಾಡಲು ಶಾಸಕ ರಾಮದಾಸ್ ಮತ್ತು ನಾಗೇಂದ್ರ ಪೈಪೋಟಿ ಮೇಲೆ ಕೆಲಸ ಮಾಡುತ್ತಿದ್ದಾರೆ. ಇದು ಅಭಿವೃದ್ಧಿ ‌ರಾಜಕಾರಣ. ಅವಕಾಶ ‌ಇದ್ದಾಗ ಏನನ್ನೂ ಮಾಡದಿದ್ದವರು ಬಹಳ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ನಮ್ಮ ಬೆಂಬಲ ಅಭಿವೃದ್ಧಿಗೋ– ಕ್ಷುಲ್ಲಕ ಕೀಳು ರಾಜಕಾರಣಕ್ಕೋ ಎಂಬುದನ್ನು ಜನರು ನಿರ್ಧರಿಸಲಿ; ಅವರಿಗೇ ಬಿಡುತ್ತೇನೆ’ ಎಂದರು.

ಭ್ರಮೆಗಳಿಂದ ಹೊರಬರೋಣ:

‘ದುಷ್ಟ ವಿಚಾರಗಳೆಂಬ ನಮ್ಮೊಳಗಿನ ಮಹಿಷಾಸುರನನ್ನು ಕೊಂದು‌ ಕೊಳ್ಳೋಣ. ಎಲ್ಲವೂ ನಮ್ಮಿಂದಲೇ ಎಂಬ ಭ್ರಮೆಗಳಿಂದ ಹೊರ ಬರೋಣ’ ಎಂದರು. ‘ರಾಮದಾಸ್ ದಿಟ್ಟ, ಧೀಮಂತ, ಧೀರ, ಬಡವರ ಬಂಧು’ ಎಂದು ಹೊಗಳಿದರು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ‘ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ನೇರವಾಗಿ ತಲುಪಿಸುವುದಕ್ಕೆ ಶ್ರಮಿಸುತ್ತಿದ್ದೇನೆ’ ಎಂದರು.

ಪೌರಕಾರ್ಮಿಕರಿಗೆ ದ್ವಿಚಕ್ರವಾಹನ (ಇವಿ) ವಿತರಿಸಲಾಯಿತು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ನೀಡಲಾಯಿತು.

ಸಂಸದ ಪ್ರತಾಪ ಸಿಂಹ, ಮೇಯರ್‌ ಶಿವಕುಮಾರ್‌, ಉಪ ಮೇಯರ್‌ ಡಾ.ಜಿ.ರೂಪಾ ಯೋಗೇಶ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿ.ಪಂ. ಸಿಇಒ ಬಿ.ಆರ್.ಪೂರ್ಣಿಮಾ, ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್, ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ಹೆಚ್ಚುವರಿ ಆಯುಕ್ತೆ ರೂಪಾ ಇದ್ದರು.

ಬಿಜೆಪಿ ಕೆ.ಆರ್.ಕ್ಷೇತ್ರದ ಅಧ್ಯಕ್ಷ ವಡಿವೇಲು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.