ADVERTISEMENT

ಸರ್ಕಾರ ಪರ್ಸೆಂಟೇಜ್ ಮೇಲೆ ನಡೆಯುತ್ತಿದೆಯೇ: ಹೈಕೋರ್ಟ್

ಕೆಎಸ್‌ಟಿಡಿಸಿಗೆ ₹ 2 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 19:24 IST
Last Updated 9 ಸೆಪ್ಟೆಂಬರ್ 2022, 19:24 IST
   

ಬೆಂಗಳೂರು: ಪ್ರವಾಸೋದ್ಯಮ ಇಲಾಖೆ ಕಟ್ಟಡವೊಂದರ ನವೀಕರಣ ಕಾಮಗಾರಿಯ ಹಣ ಬಿಡುಗಡೆಯಲ್ಲಿ ವಿಳಂಬ ಧೋರಣೆ ಪ್ರದರ್ಶಿಸಿದ ಕರ್ನಾ ಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ (ಕೆಎಸ್‌ಟಿಡಿಸಿ) ₹ 2 ಲಕ್ಷ ದಂಡ ವಿಧಿಸಿರುವ ಹೈಕೋರ್ಟ್, ‘ಈ ಸರ್ಕಾರ ಪರ್ಸೆಂಟೇಜ್‌ ಆಧಾರದಲ್ಲಿ ನಡೆಯುತ್ತಿದೆಯೇ?’ ಎಂದು ಕಿಡಿ ಕಾರಿದೆ.

ನಗರದ ಪ್ರಥಮದರ್ಜೆ ಗುತ್ತಿಗೆ ದಾರ ಎಂ.ಚಿರಂಜೀವಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಕುರಿತಂತೆ ಆದೇಶಿಸಿದ್ದು, ‘ಸಾರ್ವಜನಿಕ ಹಿತಾಸಕ್ತಿ ಕಡೆಗಣಿಸಿರುವ ಸರ್ಕಾರದ ಅಂಗ ಸಂಸ್ಥೆಗಳು ಉದಾಸೀನತೆಯ ಪ್ರತಿರೂಪವಾಗಿವೆ. ಇಂತಹುದನ್ನು ನ್ಯಾಯಾಲಯ ಸಹಿಸುವುದಿಲ್ಲ’ ಎಂದು ಖಡಕ್‌ ಎಚ್ಚರಿಕೆ ನೀಡಿದೆ.

‘ಅರ್ಜಿದಾರಿಗೆ ₹ 2 ಲಕ್ಷ ದಂಡ ವನ್ನುಬಡ್ಡಿ ಸಹಿತ ಹಾಗೂ ಬಾಕಿ ಉಳಿಸಿಕೊಂಡಿರುವ ಮೊತ್ತ ₹ 34 ಲಕ್ಷಕ್ಕೆ ವಾರ್ಷಿಕ ಶೇ 12ರಷ್ಟು ಬಡ್ಡಿ ದರಲ್ಲಿ ಪಾವತಿ ಮಾಡಬೇಕು. ಆದೇಶ ಪಾಲಿಸಿದ ಬಗ್ಗೆ 6 ವಾರಗಳಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ ಅವರಿಗೆ ವರದಿ ಸಲ್ಲಿಸಬೇಕು’ ಎಂದು ನಿಗಮಕ್ಕೆ ನಿರ್ದೇಶಿಸಿದೆ.

ADVERTISEMENT

‘ಒಂದೊಮ್ಮೆ ಹಣ ಪಾವತಿಸಲು ವಿಳಂಬ ಮಾಡಿದರೆ, ಹೆಚ್ಚುವರಿಯಾಗಿ ಶೇ 1ರಷ್ಟು ಬಡ್ಡಿ ತೆರಬೇಕಾಗುತ್ತದೆ’ ಎಂದು ಎಚ್ಚರಿಸಿರುವ ನ್ಯಾಯಪೀಠ, ‘ದಂಡದ ಮೊತ್ತ ಮತ್ತು ಬಡ್ಡಿ ಹಣವನ್ನು ವ್ಯವಸ್ಥಾಪಕ ನಿರ್ದೇಶಕರು ಸೇರಿ ಲೋಪ ಎಸಗಿರುವ ಅಧಿಕಾರಿಗಳಿಂದ ವಸೂಲಿ ಮಾಡಿಕೊಳ್ಳಬಹುದು’ ಎಂದು ನಿಗಮಕ್ಕೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.