ADVERTISEMENT

ಬಹುಮುಖ ಪ್ರತಿಭೆ ಈಶ್ವರಯ್ಯ ಅನಂತಪುರ ವಿಧಿವಶ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 10:37 IST
Last Updated 30 ಡಿಸೆಂಬರ್ 2018, 10:37 IST
ಪತ್ರಕರ್ತ ಈಶ್ವರಯ್ಯ ಅನಂತಪುರ (ಚಿತ್ರಕೃಪೆ: facebook.com/astro.mohan)
ಪತ್ರಕರ್ತ ಈಶ್ವರಯ್ಯ ಅನಂತಪುರ (ಚಿತ್ರಕೃಪೆ: facebook.com/astro.mohan)   

ಉಡುಪಿ: ಖ್ಯಾತ ಛಾಯಾಗ್ರಾಹಕ, ಸಂಗೀತ ವಿದ್ವಾಂಸ ಮತ್ತು ಪತ್ರಕರ್ತ ಈಶ್ವರಯ್ಯ ಅನಂತಪುರ (78) ಭಾನುವಾರ ಮುಂಜಾನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲ ತಿಂಗಳುಗಳಿಂದ ವಯೋ ಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಅಂತ್ಯಸಂಸ್ಕಾರ ಉಡುಪಿಯಲ್ಲಿ ಸೋಮವಾರ ನಡೆಯಲಿದೆ.

ಪುತ್ರಿಯರಾದ ಅನುರಾಧಾ ಮತ್ತು ಚೇತನಾ, ಪುತ್ರ ಶೈಲೇಂದ್ರ ಇದ್ದಾರೆ. ಪತ್ನಿ ಗಿರಿಜಾ ಎರಡು ವರ್ಷಗಳ ಹಿಂದೆಯೇ ನಿಧನರಾಗಿದ್ದರು.

ಬಹುಮುಖ ಪ್ರತಿಭೆ

ADVERTISEMENT

ಕಾಸರಗೋಡು ತಾಲ್ಲೂಕಿನ ಅನಂತಪುರ ನಾರಾಯಣಯ್ಯ ಹಾಗೂ ವೆಂಕಟಲಕ್ಷಮ್ಮ ದಂಪತಿ ಈಶ್ವರಯ್ಯ ಅವರ ತಂದೆ–ತಾಯಿ. ಅಗಸ್ಟ್‌ 12, 1940 ಈಶ್ವರಯ್ಯ ಅವರ ಜನ್ಮದಿನ. ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಇಂಗ್ಲಿಷ್ ಪದವಿ ಪಡೆದ ಈಶ್ವರಯ್ಯ, ವಿಷ್ಣು ಕಲ್ಲೂರಾಯರಿಂದ ಮಂಗಳೂರಿನ ಕಲಾಮಂದಿರದಲ್ಲಿ ಸಂಗೀತ ಕಲಿತರು. ಕೊಳಲು ವಾದನ, ವಯಲಿನ್‌, ಕ್ಲಾರಿನೆಟ್‌ ಸೇರಿದಂತೆ ಹಲವು ವಾದ್ಯಗಳನ್ನು ಅಭ್ಯಸಿಸಿದ್ದರು. ಛಾಯಾಗ್ರಹಣದಲ್ಲಿಯೂ ಅವರಿಗೆ ಪರಿಶ್ರಮವಿತ್ತು. ಉತ್ತಮ ವಾಗ್ಮಿ ಮತ್ತು ಸಮರ್ಥ ವಿಮರ್ಶಕರೂ ಆಗಿದ್ದರು.

ಪತ್ರಿಕಾರಂಗಕ್ಕೆ ಪ್ರವೇಶಿಸುವ ಮೊದಲು ಲೋಕೋಪಯೋಗಿ ಇಲಾಖೆಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿದ್ದರು. ಆ ಅವಧಿಯಲ್ಲಿ ಸುಮಾರು 60 ಕಥೆಗಳು, ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಅನೇಕ ವೈಚಾರಿಕ ಲೇಖನಗಳನ್ನೂ ಬರೆದಿದ್ದರು. ಉದಯವಾಣಿ ಪತ್ರಿಕೆಯ ಮೂಲಕ ಅವರ ಪತ್ರಿಕೋದ್ಯಮ ವೃತ್ತಿ ಆರಂಭವಾಯಿತು. ಪುರವಣಿ ವಿಭಾಗದಲ್ಲಿ ಲಲಿತರಂಗ, ಕಲಾವಿಹಾರ ಅಂಕಣಗಳಿಂದ ಪ್ರಸಿದ್ಧರಾದರು.

’ತುಷಾರ’ ಮಾಸಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಛಾಯಾಚಿತ್ರ ಲೇಖನಗಳು, ಛಾಯಾಚಿತ್ರಗಳ ಸ್ಪರ್ಧೆ ಮೊದಲಾದ ಅನೇಕ ಹೊಸ ಪ್ರಯೋಗಗಳನ್ನು ತಂದರು. ಯುವಕ ಯುವತಿಯರಿಗಾಗಿ ಆರಂಭಿಸಿದ ‘ಸರಸ’ಎಂಬ ಲಲಿತ ಪ್ರಬಂಧ ಅಂಕಣವು ಜನಪ್ರಿಯವಾಯಿತು.

ಸಂಗೀತ ಪ್ರೇಮಿಯಾದ ಈಶ್ವರಯ್ಯನವರು ಉಡುಪಿಯಲ್ಲಿ ಅರವಿಂದ ಹೆಬ್ಬಾರ್ ಜೊತೆಗೂಡಿ‘ರಾಗಧ್ವನಿ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಸಂಸ್ಥೆಯ ಆಶ್ರಯದಲ್ಲಿ ತಿಂಗಳಿಗೊಮ್ಮೆ ‘ಮನೆಮನೆ ಸಂಗೀತ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡು ಓರ್ವ ಕಲಾವಿದರ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು. ‘ರಾಗಧನಶ್ರೀ’ ಎಂಬ ಸಂಗೀತ ಮಾಸಿಕದ ಸಂಪಾದಕರಾಗಿಯೂ, ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುವರು. ಈಶ್ವರಯ್ಯ ಸಮರ್ಥಅನುವಾದಕರೂ ಹೌದು. ನವಕರ್ನಾಟಕ ಪ್ರಕಾಶನವು ಪ್ರಕಟಿಸಿದ ವಿಶ್ವಕಥಾಕೋಶದ 16ನೇ ಸಂಪುಟಕ್ಕಾಗಿ ಗ್ರೀಸ್‌, ಟರ್ಕಿ ಮತ್ತು ಸೈಪ್ರಸ್‌ ದೇಶಗಳ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು.

ಈಶ್ವರಯ್ಯನವರ ಸಾಧನೆಗೆ ಗೌರವಾದರಗಳು ಅವರನ್ನು ಅರಸಿಕೊಂಡು ಬಂದಿವೆ. ಶಾಸ್ತ್ರೀಯ ಸಂಗೀತ ಸಭಾ ಕಾರ್ಕಳ, ಸಂಗೀತ ಪರಿಷತ್ತು ಮಂಗಳೂರು, ರಾಗಧನ ಉಡುಪಿ, ಇಮೇಜ್‌ ಪುತ್ತೂರು, ಕ್ರಿಯೇಟಿವ್‌ ಕೆಮರಾ ಕ್ಲಬ್‌ ಮಂಗಳೂರು, ಗಾನ ಕಲಾ ಪರಿಷತ್‌ ಬೆಂಗಳೂರು, ಪದವೀಧರ ಯಕ್ಷಗಾನ ಸಮಿತಿ ಮುಂಬಯಿ, ಶ್ರೀಪೇಜಾವರ ಮಠ ಉಡುಪಿ, ಗಾಯನ ಸಮಾಜ ಬೆಂಗಳೂರು, ಅಖೀಲ ಭಾರತ ಸಾಹಿತ್ಯ ಸಮ್ಮೇಳನ ಗದಗ, ಮಣಿಪಾಲ ಮೀಡಿಯಾ ನೆಟ್‌ವರ್ಕ್ಸ್ ಮೊದಲಾದ ಅನೇಕ ಸಂಘ ಸಂಸ್ಥೆಗಳು ಅವರನ್ನು ಗೌರವಿಸಿವೆ.

ಪೊಲ್ಯ ಯಕ್ಷಗಾನ ಪ್ರಶಸ್ತಿ (1994), ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ (2000), ರಾಜ್ಯಮಟ್ಟದ ಸಂದೇಶ ಪತ್ರಿಕೋದ್ಯಮ ಸಮ್ಮಾನ ಪ್ರಶಸ್ತಿ (2001), ರಂಗವಾಚಸ್ಪತಿ ಬಿರುದು (2003), ಪರಶುರಾಮ ಪ್ರಶಸ್ತಿ (2003), ವ್ಯಾಸ ಸಾಹಿತ್ಯ ಪ್ರಶಸ್ತಿ (2008), ನುಡಿಸಿರಿ ರಾಜ್ಯ ಪ್ರಶಸ್ತಿ ಮೊದಲಾದ ಶ್ರೇಷ್ಠ ಪ್ರಶಸ್ತಿಗಳು ಈಶ್ವರಯ್ಯನವರಿಗೆ ಪ್ರಾಪ್ತವಾಗಿವೆ.

ಈಶ್ವರಯ್ಯನವರ ಬಾಳು- ಬದುಕಿನ ಕುರಿತಾಗಿ ಉದಯವಾಣಿಯ ಹಿರಿಯ ಉಪ ಸಂಪಾದಕರಾಗಿದ್ದ ನಿತ್ಯಾನಂದ ಪಡ್ರೆಯವರು ’ಕಲಾಲೋಕದ ಚಿಂತಕ ಎ. ಈಶ್ವರಯ್ಯ‘ ಎಂಬ ಕೃತಿಯನ್ನು ರಚಿಸಿದ್ದಾರೆ. ಇದನ್ನು ಕಾಂತಾವರ ಕನ್ನಡ ಸಂಘ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.