ADVERTISEMENT

ಸೆಮಿಕಂಡಕ್ಟರ್‌: ರಾಜ್ಯದಲ್ಲಿ ₹ 22,900 ಕೋಟಿ ಹೂಡಿಕೆ

ರಾಜ್ಯ ಸರ್ಕಾರ – ಐಎಸ್‌ಎಂಸಿ ಅನಲಾಗ್‌ ಫ್ಯಾಬ್‌ ಕಂಪನಿ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 1 ಮೇ 2022, 19:30 IST
Last Updated 1 ಮೇ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ₹ 22,900 ಕೋಟಿ ವೆಚ್ಚದಲ್ಲಿ ಸೆಮಿಕಂಡಕ್ಟರ್‌ ತಯಾರಿಕಾ ಉದ್ದಿಮೆ ಸ್ಥಾಪಿಸಲು ಐಎಸ್‌ಎಂಸಿ ಅನಲಾಗ್‌ ಫ್ಯಾಬ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ರಾಜ್ಯ ಸರ್ಕಾರದ ಜತೆ ಭಾನುವಾರ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಯೋಜನೆ
ಯಿಂದ 11,500 ಉದ್ಯೋಗ ಸೃಷ್ಟಿಯಾಗಲಿದೆ.

ಅಬುಧಾಬಿಯ ನೆಕ್ಸ್ಟ್‌ ಆರ್ಬಿಟ್‌ ವೆಂಚರ್ಸ್‌ ಮತ್ತು ಇಸ್ರೇಲ್‌ನ ಟವರ್‌ ಸೆಮಿಕಂಡಕ್ಟರ್‌ ಸಹಭಾಗಿತ್ವದ ಐಎಸ್‌ಎಂಸಿ, ರಾಜ್ಯದಲ್ಲಿ ತನ್ನ ಉದ್ಯಮ ವಿಸ್ತರಿಸುವ ಪ್ರಯತ್ನಕ್ಕೆ ಚಾಲನೆ ನೀಡಿದೆ. ಐಎಸ್‌ಎಂಸಿ ನಿರ್ದೇಶಕ ಅಜಯ್‌ ಜಲನ್‌ ಹಾಗೂ ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ಒಪ್ಪಂದಕ್ಕೆ ಸಹಿ ಹಾಕಿದರು.

ಕೇಂದ್ರ ಸರ್ಕಾರದ ‘ಭಾರತೀಯ ಸೆಮಿಕಂಡಕ್ಟರ್‌ ಮಿಷನ್‌’ ಯೋಜನೆಯಡಿ ಆರಂಭವಾಗುತ್ತಿರುವ ಅತಿದೊಡ್ಡ ಸೆಮಿಕಂಡಕ್ಟರ್‌ ಫ್ಯಾಬ್ರಿಕೇಷನ್‌ ಉದ್ದಿಮೆಗಳಲ್ಲಿ ಇದು ಒಂದು. 1,500 ನೇರ ಉದ್ಯೋಗ ಸೃಷ್ಟಿಯಾದರೆ, 10,000 ಪರೋಕ್ಷ ಉದ್ಯೋಗಗಳ ಸೃಜನೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ.

ADVERTISEMENT

ಏಳು ವರ್ಷಗಳ ಅವಧಿಯಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಗುರಿ ಹೊಂದಲಾಗಿದೆ. ಮೈಸೂರಿನ ಕೋಚನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 150 ಎಕರೆ ಜಮೀನು ಮಂಜೂರು ಮಾಡುವಂತೆ ಐಎಸ್‌ಎಂಸಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

ಮಹತ್ವದ ಯೋಜನೆ: ಒಪ್ಪಂದಕ್ಕೆ ಸಹಿಹಾಕಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಐಎಸ್‌ಎಂಸಿ ಅನಲಾಗ್‌ ಫ್ಯಾಬ್‌ ಕಂಪನಿ ತನ್ನ ಘಟಕವನ್ನು ರಾಜ್ಯದಲ್ಲಿ ಸ್ಥಾಪಿಸುತ್ತಿದೆ. ಈ ಒಪ್ಪಂದವು ವಿಶ್ವದ ಸೆಮಿಕಂಡಕ್ಟರ್‌ ನಕ್ಷೆಯಲ್ಲಿ ಕರ್ನಾಟಕವವನ್ನು ಗುರುತಿಸುವಂತೆ ಮಾಡುತ್ತದೆ’ ಎಂದರು.

‘ಸೆಮಿಕಂಡಕ್ಟರ್‌ ಕ್ಷೇತ್ರದ ಹೂಡಿಕೆ ಆಕರ್ಷಿಸಲು ದೇಶದ ಹಲವು ರಾಜ್ಯಗಳು ಸ್ಪರ್ಧೆಯಲ್ಲಿದ್ದವು. ಈ ಸಂದರ್ಭದಲ್ಲೇ ರಾಜ್ಯ ಸರ್ಕಾರದ ಪ್ರಮುಖವಾದ ಒಪ್ಪಂದಕ್ಕೆ ಸಹಿಹಾಕಿದೆ. ರಾಜ್ಯದಲ್ಲಿ ಹೂಡಿಕೆದಾರರಿಗೆ ಆರ್ಥಿಕ ಪ್ರೋತ್ಸಾಹಗಳನ್ನು ನೀಡುವುದರ ಜತೆಗೆ ಕಾರ್ಯನಿರ್ವಹಣೆಗೆ ಪೂರಕವಾದ ಉತ್ತಮ ವಾತಾವರಣ ಸೃಷ್ಟಿಸಲಾಗಿದೆ. ದೇಶದಲ್ಲೇ ಅತ್ಯುತ್ತಮವಾದ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ ಹೊಂದಿರುವುದರಿಂದ ಹೆಚ್ಚಿನ ಹೂಡಿಕೆ ಹರಿದುಬರುತ್ತಿದೆ’ ಎಂದು ಹೇಳಿದರು.

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಭಾರತದಲ್ಲಿನ ಇಸ್ರೇಲ್ ರಾಯಭಾರಿ ನಾವರ್ ಗಿಲೋನ್, ಐಎಸ್ಎಂಸಿ ಮುಖ್ಯಸ್ಥ ಇರೇಜ್ ಇಂಬರಮನ್ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.