ADVERTISEMENT

ರಮೇಶ್‌ ಕುಮಾರ್ ಪ್ರತಿಕ್ರಿಯೆ | ಅನರ್ಹ ಅನ್ನಿಸಿಕೊಳ್ಳೋದು ಗೌರವ ಅಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ನವೆಂಬರ್ 2019, 6:26 IST
Last Updated 13 ನವೆಂಬರ್ 2019, 6:26 IST
   

ಬೆಂಗಳೂರು: ‘ಸುಪ್ರೀಂಕೋರ್ಟ್‌ ತೀರ್ಪನ್ನು ನಾನು ಗೌರವಿಸ್ತೀನಿ. ಪ್ರಕರಣವನ್ನು ನ್ಯಾಯಮೂರ್ತಿಗಳು ಹೇಗೆ?ಯಾವ ದೃಷ್ಟಿಕೋನದಿಂದ ವಿಶ್ಲೇಷಿಸಿದ್ದಾರೆ ಎನ್ನುವ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ ಎಂದು 17 ಶಾಸಕರನ್ನು ಅನರ್ಹಗೊಳಿಸಿದ್ದ ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಶಾಸಕರು ಸಲ್ಲಿಸಿದ್ದ ರಾಜೀನಾಮೆಯನ್ನು ಒಪ್ಪಿಕೊಳ್ಳದೆ ಅನರ್ಹಗೊಳಿಸಿದ್ದ ರಮೇಶ್‌ ಕುಮಾರ್‌, ‘ರಾಜೀನಾಮೆ ಒಂದು ಗೌರವಯುತವಾದ ಪ್ರಕ್ರಿಯೆ, ಅನರ್ಹತೆ ಒಂದು ಶಿಕ್ಷೆ.ರಾಜೀನಾಮೆ ಮತ್ತು ಅನರ್ಹತೆಯನ್ನು ಒಂದೇ ದೃಷ್ಟಿಕೋನದಿಂದ ನೋಡಲು ಆಗಲ್ಲ. ಅನರ್ಹಗೊಳಿಸಿದ್ದು ಸರಿಯಿದೆ ಎಂದೇ ಸುಪ್ರೀಂಕೋರ್ಟ್‌ ಸಹ ಹೇಳಿದೆ’ ಎಂದರು.

ಪಕ್ಷಾಂತರ ನಿಷೇಧ ಕಾಯ್ದೆಗೆ ಆಧಾರವಾಗಿರುವಸಂವಿಧಾನದ 10ನೇ ಪರಿಚ್ಛೇದದಲ್ಲಿ ‘ಸದನದ ಉಳಿದ ಅವಧಿಗೆ’ ಎನ್ನುವ ಪದಗಳ ಉಲ್ಲೇಖವಿದೆ. ಈ ದೃಷ್ಟಿಯಿಂದ ನೋಡಿದರೆ ಕರ್ನಾಟಕ ವಿಧಾನಸಭೆಯ ಅವಧಿ 2023ರವರೆಗೆ ಇದೆ. ಈ ಹಿನ್ನೆಲೆಯಲ್ಲಿ ನಾನು ಅನರ್ಹತೆಯ ತೀರ್ಮಾನ ತೆಗೆದುಕೊಂಡಿದ್ದೆ ಎಂದರು.

ಪ್ರಕರಣದಲ್ಲಿ ನಾನು ಅರ್ಜಿದಾರನೂ ಅಲ್ಲ, ಪ್ರತಿವಾದಿಯೂ ಅಲ್ಲ. ಮೇಲ್ಮನವಿ ನಾನು ಸಲ್ಲಿಸುವುದಿಲ್ಲ. ಕಾಂಗ್ರೆಸ್‌ ಪಕ್ಷ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೆ ಎಂದು ನುಡಿದರು.

‘ತೀರ್ಪಿನಿಂದ ನಾನುಭಾಗಶಃ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದೇನೆ.ಅನರ್ಹ ಅಂತ ಅನ್ನಿಸಿಕೊಳ್ಳೋದು ಗೌರವದ ಸಂಕೇತ ಅಲ್ಲ. ಅವರಿಗೆ ಪುನಃ ಜನರ ಮುಂದೆ ನಿಲ್ಲಿಸಿಕೊಳ್ಳಲು ಅವಕಾಶ ಕೊಡಬಾರದಿತ್ತು. ಈಚೆಗೆ ನಡೆದ ಬಹುತೇಕ ಚುನಾವಣೆಗಳಲ್ಲಿ ಪಕ್ಷಾಂತರಿಗಳನ್ನು ಜನರು ತಿರಸ್ಕರಿಸಿದ್ದಾರೆ. ಇವರ ವಿಚಾರ ಏನಾಗುತ್ತೋ ನೋಡೋಣ’ ಎಂದು ರಮೇಶ್‌ಕುಮಾರ್‌ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.