ADVERTISEMENT

ಶೋಭಾ ಡೆವಲಪರ್ಸ್‌ ಮೇಲೆ ಐ.ಟಿ ದಾಳಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 16:27 IST
Last Updated 20 ಮಾರ್ಚ್ 2023, 16:27 IST
   

ಬೆಂಗಳೂರು: ರಿಯಲ್‌ ಎಸ್ಟೇಟ್‌ ಉದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಶೋಭಾ ಡೆವಲಪರ್ಸ್‌ನ ಕೇಂದ್ರ ಕಚೇರಿ ಹಾಗೂ ತಯಾರಿಕಾ ಘಟಕಗಳ ಮೇಲೆ ಸೋಮವಾರ ದಾಳಿಮಾಡಿರುವ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು, ಶೋಧ ನಡೆಸುತ್ತಿದ್ದಾರೆ.

ನಗರದ ಸರ್ಜಾಪುರ ಬಳಿ ಇರುವ ಶೋಭಾ ಡೆವಲಪರ್ಸ್‌ನ ಕೇಂದ್ರ ಕಚೇರಿ ಹಾಗೂ ಜಿಗಣಿಯಲ್ಲಿರುವ ಮರಮುಟ್ಟು, ಸಿಮೆಂಟ್‌ ಮತ್ತು ಉಕ್ಕು ಉತ್ಪನ್ನಗಳ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆದಿದೆ. ಆದಾಯ ತೆರಿಗೆ ಇಲಾಖೆಯ ಚೆನ್ನೈ ಕಚೇರಿಯಿಂದ ಬಂದಿರುವ 25ಕ್ಕೂ ಹೆಚ್ಚು ಅಧಿಕಾರಿಗಳು ಸೋಮವಾರ ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ತಡರಾತ್ರಿಯೂ ಶೋಧ ಮುಂದುವರಿದಿತ್ತು.

ತೆರಿಗೆ ವಂಚನೆ, ಆದಾಯ ಮುಚ್ಚಿಟ್ಟಿರುವುದು, ಬೃಹತ್‌ ಪ್ರಮಾಣದ ಹಣದ ವರ್ಗಾವಣೆಗೆ ಸಂಬಂಧಿಸಿದಂತೆ ಪರಿಶೀಲನೆಗಾಗಿ ಶೋಧ ನಡೆಸಲಾಗುತ್ತಿದೆ. ಕಂಪನಿಯ ಕಚೇರಿಯ ಪ್ರವೇಶ ದ್ವಾರಗಳನ್ನು ಮುಚ್ಚಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಬ್ಯಾಂಕ್‌ ವಹಿವಾಟು, ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿನ ಹೂಡಿಕೆ ಹಾಗೂ ಮಾರಾಟಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶೋಭಾ ಡೆವಲಪರ್ಸ್‌ನ ಪ್ರತಿನಿಧಿಗಳು, ‘ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಂಪನಿಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಇದೊಂದು ಸಾಮಾನ್ಯ ಪ್ರಕ್ರಿಯೆ. ಐ.ಟಿ ಅಧಿಕಾರಿಗಳ ಕಾರ್ಯಾಚರಣೆಗೆ ಕಂಪನಿಯು ಸಂಪೂರ್ಣ ಸಹಕಾರ ನೀಡಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.