ADVERTISEMENT

ಐ.ಟಿ ದಾಳಿ: ₹ 15.53 ಕೋಟಿ ನಗದು, 10.14 ಕೆಜಿ ಚಿನ್ನ ವಶ

​ಪ್ರಜಾವಾಣಿ ವಾರ್ತೆ
Published 6 ಮೇ 2023, 19:34 IST
Last Updated 6 ಮೇ 2023, 19:34 IST
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ನಗದು
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ನಗದು   

ಬೆಂಗಳೂರು: ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡುವುದಕ್ಕಾಗಿ ಲೇವಾದೇವಿಗಾರರಲ್ಲಿ ಹಣ ಸಂಗ್ರಹಿಸಿಟ್ಟಿರುವ ಮಾಹಿತಿ ಆಧರಿಸಿ ಬೆಂಗಳೂರು ನಗರ ಮತ್ತು ರಾಯಚೂರಿನಲ್ಲಿ ಗುರುವಾರ ಶೋಧ ನಡೆಸಿರುವ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು, ₹ 15.53 ಕೋಟಿ ನಗದು ಹಾಗೂ ₹ 7.08 ಕೋಟಿ ಮೌಲ್ಯದ 10.14 ಕೆ.ಜಿ. ಚಿನ್ನ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಒಂಬತ್ತು ವಿಧಾನಸಭಾ ಕ್ಷೇತ್ರಗಳ 15 ಹಾಗೂ ರಾಯಚೂರಿನ ಒಂದು ಸ್ಥಳಗಳ ಮೇಲೆ ದಾಳಿ ಮಾಡಿ ಶೋಧ ನಡೆಸಿದ್ದರು. ಬಡ್ಡಿ ವಹಿವಾಟು ನಡೆಸುತ್ತಿದ್ದ ಲೇವಾದೇವಿಗಾರರ ಮನೆ, ಕಚೇರಿಗಳಲ್ಲಿ ನಗದು ತುಂಬಿಸಿ ಇರಿಸಿದ್ದ ಚೀಲಗಳು ಮತ್ತು ಸೂಟ್‌ಕೇಸ್‌ಗಳು ಪತ್ತೆಯಾಗಿವೆ. ಕೆಲವರ ಮನೆಗಳಲ್ಲಿ ಚಿನ್ನಾಭರಣಗಳನ್ನು ದಾಸ್ತಾನು ಮಾಡಿದ್ದು, ಅವುಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

ಹೆಬ್ಬಾಳ, ಶಿವಾಜಿನಗರ, ಚಿಕ್ಕಪೇಟೆ ಮತ್ತು ಜಯನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ನಾಲ್ಕು ಸ್ಥಳಗಳಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ₹ 23.50 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ADVERTISEMENT

‘ಫ್ಲೈಯಿಂಗ್‌ ಸ್ಕ್ವಾಡ್‌’ ಕಾರ್ಯಾಚರಣೆಗಳಲ್ಲಿ ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ₹ 38 ಲಕ್ಷ ನಗದು ಮತ್ತು ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ 21 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ನಗದು

ಯಾವ ಕ್ಷೇತ್ರ

ಎಷ್ಟು ಮೊತ್ತ ಶಿವಾಜಿನಗರ; ₹ 4.77 ಕೋಟಿ ರಾಜರಾಜೇಶ್ವರಿ; ₹ 3.44 ಕೋಟಿ ಮಲ್ಲೇಶ್ವರ; ₹ 3.35 ಕೋಟಿ ಪುಲಕೇಶಿನಗರ; ₹ 2.30 ಕೋಟಿ ಶಾಂತಿನಗರ; ₹ 62.83 ಲಕ್ಷ ಗಾಂಧಿನಗರ; ₹ 55 ಲಕ್ಷ  ರಾಯಚೂರು; ₹ 30 ಲಕ್ಷ 10.14ಕೆ.ಜಿ ಚಿನ್ನ ಎಲ್ಲೆಲ್ಲಿ ವಶ *ಹೆಬ್ಬಾಳ, ಶಾಂತಿನಗರ ಮತ್ತು ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾಲ್ಕು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ ₹ 5 ಕೋಟಿ ಮೌಲ್ಯದ 6.59 ಕೆ.ಜಿ. ಚಿನ್ನ ವಶ *ರಾಯಚೂರು ಕ್ಷೇತ್ರದ ಸ್ಥಳವೊಂದರಲ್ಲಿ ದಾಸ್ತಾನು ಮಾಡಿದ್ದ ₹ 2.08 ಕೋಟಿ ಮೌಲ್ಯದ 3.55 ಕೆ. ಚಿನ್ನ ವಶ

ಸ್ವತ್ತು ವಶದಲ್ಲಿ ದುಪ್ಪಟ್ಟು

ಸಾಧನೆ ‘2018ರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಅಕ್ರಮ ತಡೆಗೆ ನಡೆಸಿದ ಕಾರ್ಯಾಚರಣೆಗಳಲ್ಲಿ ಒಟ್ಟು ₹ 185.74 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಚುನಾವಣೆಯಲ್ಲಿ ಶುಕ್ರವಾರದವರೆಗೆ ₹ 365.22 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.