ADVERTISEMENT

ಐಟಿ ದಾಳಿ: ಆಟೊ ಚಾಲಕ ಭವ್ಯ ಬಂಗಲೆ ಮಾಲೀಕ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ದಾಳಿ

​ಪ್ರಜಾವಾಣಿ ವಾರ್ತೆ
Published 1 ಮೇ 2019, 20:16 IST
Last Updated 1 ಮೇ 2019, 20:16 IST
ಸುಬ್ರಮಣಿ
ಸುಬ್ರಮಣಿ   

ಬೆಂಗಳೂರು: ಆಟೊರಿಕ್ಷಾ ಚಾಲಕರೊಬ್ಬರ ₹.1.6 ಕೋಟಿ ಮೌಲ್ಯದ ಬಂಗಲೆ ಮೇಲೆ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಅವರ ವಿರುದ್ಧ ತನಿಖೆ ಆರಂಭಿಸಿದ್ದಾರೆ.

ಆಟೊರಿಕ್ಷಾ ಚಾಲಕ ಸುಬ್ರಮಣಿ ಅವರಿಗೆ ಸೇರಿದ ವೈಟ್‌ಫೀಲ್ಡ್‌ ಪ್ರದೇಶದಲ್ಲಿರುವ ‘ಜತ್ತಿ ದ್ವಾರಕಮಾಯಿ ವಿಲ್ಲಾ’ ಹೆಸರಿನ ಭಾರಿ ಬಂಗಲೆಯಲ್ಲಿ ಐ.ಟಿ ಅಧಿಕಾರಿಗಳು ಕಳೆದ ತಿಂಗಳ 16ರಂದು ಶೋಧ ನಡೆಸಿದ್ದಾರೆ.

ಈ ವೇಳೆ ಅವರ ಮನೆಯಲ್ಲಿ ₹7.9 ಕೋಟಿ ನಗದನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಐ.ಟಿ ಅಧಿಕಾರಿಗಳು ಖಚಿತಪಡಿಸಿಲ್ಲ. ಈ ಕುರಿತಂತೆ ಪ್ರತಿಕ್ರಿಯಿಸಲು ಐ.ಟಿ ಅಧಿಕಾರಿಗಳು ಲಭ್ಯವಾಗಿಲ್ಲ.

ADVERTISEMENT

₹1.6 ಕೋಟಿ ಮೌಲ್ಯದ ಈ ಬಂಗಲೆಯನ್ನು ಸುಬ್ರಮಣಿಯವರು ಸಂಪೂರ್ಣ ನಗದು ಪಾವತಿಸಿ ಖರೀದಿ ಮಾಡಿರುವುದು ಐ.ಟಿ ಅಧಿಕಾರಿಗಳ ಹುಬ್ಬೇರಿಸಿದೆ.

ಸುಬ್ರಮಣಿ ಅವರ ಈ ಆಸ್ತಿ ಬೇನಾಮಿ ಗಳಿಕೆ ಎಂದು ಸಂಶಯಿಸಲಾಗಿದೆ. ಪ್ರಾಥಮಿಕ ತನಿಖೆಯ ಅನುಸಾರ ಅವರು ನಗರದ ಕೆಲವು ಪ್ರಮುಖ ರಾಜಕಾರಣಿಗಳ ಸಖ್ಯ ಹೊಂದಿದ್ದಾರೆ ಎನ್ನಲಾಗಿದೆ.

ಸದ್ಯ, ಆದಾಯ ತೆರಿಗೆ ಅಧಿಕಾರಿಗಳು ಸುಬ್ರಮಣಿ ವಿರುದ್ಧ ಬೇನಾಮಿ ಆಸ್ತಿ ವರ್ಗಾವಣೆಗಳ ಕಾಯ್ದೆ–1988ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಸುಬ್ರಮಣಿ ಮನೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ನಗರದ ಬಿಲ್ಡರ್ ಒಬ್ಬರಿಗೂ ಐ.ಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ನನಗೆ ಸಂಬಂಧ ಇಲ್ಲ: ಲಿಂಬಾವಳಿ

‘ಆಟೊ ಚಾಲಕನ ಮನೆ ಮೇಲಿನ ಐ.ಟಿ ದಾಳಿಯೊಂದಿಗೆ ನನ್ನ ಹೆಸರನ್ನು ಸೇರಿಸಲಾಗುತ್ತಿದ್ದು, ನನಗೂ ಅದಕ್ಕೂ ಸಂಬಂಧ ಇಲ್ಲ’ ಎಂದು ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಸ್ಪಷ್ಪಪಡಿಸಿದ್ದಾರೆ.

‘ಹಣ ಯಾರಿಗೆ ಸೇರಿದ್ದು ಎಂಬುದನ್ನು ಬಹಿರಂಗಪಡಿಸಬೇಕು. ಸರ್ಕಾರಕ್ಕೆ ಮೋಸ ಮಾಡುವ ಯಾವುದೇ ವ್ಯಕ್ತಿಗೆ ಕಠಿಣ ಶಿಕ್ಷೆ ಆಗಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.