ADVERTISEMENT

ಗಾಯತ್ರಿ ಶಾಂತೇಗೌಡ ಮನೆಯಲ್ಲಿ ಐಟಿ ಶೋಧ; ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

ಬೇಲೂರಿನಲ್ಲಿರುವ ಅಳಿಯನ ಮನೆ ಮೇಲೂ ದಾಳಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 21:19 IST
Last Updated 17 ನವೆಂಬರ್ 2022, 21:19 IST
   

ಚಿಕ್ಕಮಗಳೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಿ.ಗಾಯತ್ರಿ ಶಾಂತೇಗೌಡ ಅವರ ನಗರದ ಮನೆ, ಕಚೇರಿ, ಮರ್ಲೆ ಗ್ರಾಮದ ಬಳಿಯ ಜಲ್ಲಿ ಕ್ರಷರ್‌ ಸಹಿತ ಆರು ಕಡೆ ಆದಾಯ ತೆರಿಗೆ (ಐಟಿ) ಇಲಾಖೆಯ ಅಧಿಕಾರಿಗಳು ಗುರುವಾರ ಏಕಕಾಲಕ್ಕೆ ದಾಳಿ ಮಾಡಿ, ಪರಿಶೀಲನೆ ನಡೆಸಿದರು.

ನಗರದ ಹೂವಿನ ಮಾರುಕಟ್ಟೆ (ಹಿಂದೂ ಮುಸಾಫಿರ್‌ ಛತ್ರ)ಬಳಿ ಇರುವ ಮನೆಯಲ್ಲಿಬೆಳಿಗ್ಗೆಯಿಂದ ಬೀಡುಬಿಟ್ಟು ಗಾಯತ್ರಿ ಅವರ ವಹಿವಾಟುಗಳ ಮಾಹಿತಿ, ವಿವರ ಕಲೆ ಹಾಕಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದರು. ಗಾಯತ್ರಿ ಅವರ ಸಹೋದರನ ಪುತ್ರ ಹಾಗೂ ಗುತ್ತಿದಾರರೊಬ್ಬರ ಮನೆಗಳಲ್ಲೂ ಶೋಧ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಕಾರ್ಯಾಚರಣೆ ಸ್ಥಳಗಳಲ್ಲಿ ಪೊಲೀಸ್‌ ಪಹರೆ ಇತ್ತು. ‘ಗಾಯತ್ರಿ ಅವರು ಊರಿನಲ್ಲಿ ಇಲ್ಲ. ದಂಪತಿ ತಿರುಪತಿಗೆ ತೆರಳಿದ್ದಾರೆ’ ಎಂದು ಗಾಯತ್ರಿ ಕುಟುಂಬದ ಆಪ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕಾಂಗ್ರೆಸ್‌ ಪ್ರತಿಭಟನೆ: ಆದಾಯ ತೆರಿಗೆ ದಾಳಿ ಖಂಡಿಸಿ ಕಾಂಗ್ರೆಸ್ ಮುಖಂಡರು ಪ್ರತಿಭಟಿಸಿದರು. ಶಾಸಕ ಸಿ.ಟಿ.ರವಿ, ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಸರ್ಕಾರ ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಿ.ಟಿ.ರವಿ ಅವರ ಮನೆ ಮೇಲೂ ಐಟಿ ದಾಳಿ ನಡೆಸಬೇಕು’ ಎಂದು ಆಗ್ರಹಿಸಿದರು. ಮುಖಂಡರಾದ ಎಂ.ಎಲ್.ಮೂರ್ತಿ, ಕೆ.ಮಹಮ್ಮದ್, ರೇಖಾ ಹುಲಿಯಪ್ಪಗೌಡ, ಹಿರೇಮಗಳೂರು ಪುಟ್ಟಸ್ವಾಮಿಇದ್ದರು.

ಐಟಿ ಕಾರಿನ ಮೇಲೆ ‘ಅಭಿನವ ವೆಡ್ಸ್ ದೀಪಿಕಾ’ ಸ್ಟಿಕ್ಕರ್!
ಬೇಲೂರು: ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ಅಳಿಯ, ಸ್ಥಳೀಯ ಜೆಡಿಎಸ್ ಮುಖಂಡ ಬಿ.ಎಂ.ಸಂತೋಷ್ ಮನೆ ಮೇಲೆ ದಾಳಿ ನಡೆಸಿದಐಟಿ ಅಧಿಕಾರಿಗಳು ಕಾರಿನ ಮುಂಭಾಗದಲ್ಲಿ ‘ಅಭಿನವ ವೆಡ್ಸ್ ದೀಪಿಕಾ’ ಸ್ಟಿಕ್ಕರ್ ಅಂಟಿಸಿಕೊಂಡು ಬೆಂಗಳೂರಿನಿಂದ ಬಂದಿದ್ದರು!

ಇಬ್ಬರು ಪಿಎಸ್‌ಐಗಳೊಂದಿಗೆ ಎರಡು ಬಾಡಿಗೆ ಕಾರಿನಲ್ಲಿ ಬಂದಿದ್ದ ಅಧಿಕಾರಿಗಳು, ಸಂತೋಷ್ ಮಾಲೀಕತ್ವದ ಮನೆ, ಹೋಟೆಲ್, ವಸತಿಗೃಹ, ಕಲ್ಯಾಣ ಮಂಟಪದಲ್ಲಿ ದಾಖಲೆ ಪರಿಶೀಲಿಸಿದರು.

ಸಂತೋಷ್ ಹಾಗೂ ಅವರ ತಾಯಿ ಎಂ.ವಿ.ಹೇಮಾವತಿ, ಹೋಟೆಲ್ ಅನ್ನು ಗುತ್ತಿಗೆಗೆ ಲೀಸ್‌ಗೆ ಪಡೆದಿರುವ ಶ್ರೇಯಸ್ ಅವರ ವಿಚಾರಣೆ ನಡೆಸಿದರು. ಸಂಜೆವರೆಗೂ ಪರಿಶೀಲನೆ ನಡೆಯಿತು.

ಸಂತೋಷ್‌ ತಂದೆ ದಿವಂಗತ ಬಿ.ಸಿ.ಮಂಜುನಾಥ್ ಪುರಸಭೆ ಅಧ್ಯಕ್ಷರಾಗಿದ್ದರು. ಜೆಡಿಎಸ್‌ನ ಪ್ರಭಾವಿ ಮುಖಂಡರಾಗಿದ್ದರು. ತಾಯಿ ಪುರಸಭೆ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.