ADVERTISEMENT

ಪರಿಶಿಷ್ಟರಿಗೆ ಶೇ 75 ರಿಯಾಯ್ತಿ ದರದಲ್ಲಿ ಕೈಗಾರಿಕಾ ಜಮೀನು‌: ಜಗದೀಶ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 12:04 IST
Last Updated 5 ಫೆಬ್ರುವರಿ 2021, 12:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ಕೈಗಾರಿಕೆಗಳನ್ನು ಸ್ಥಾಪಿಸಲು ಜಮೀನು ಅಥವಾ ಕೈಗಾರಿಕಾ ಶೆಡ್‌ಗಳನ್ನು ಶೇ 75 ರಷ್ಟು ರಿಯಾಯ್ತಿ ದರದಲ್ಲಿ ಹಂಚಿಕೆ ಮಾಡಲಾಗುವುದು ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರು ವಿಧಾನಸಭೆಯಲ್ಲಿ ತಿಳಿಸಿದರು.

ಈಗ ಶೇ 50 ರಷ್ಟು ರಿಯಾಯ್ತಿ ದರದಲ್ಲಿ ಜಮೀನು ಮತ್ತು ಕೈಗಾರಿಕಾ ಶೆಡ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ರಿಯಾಯ್ತಿ ಪ್ರಮಾಣವನ್ನು ಶೇ 75 ಕ್ಕೆ ಹೆಚ್ಚಿಸಲು ಮುಖ್ಯಮಂತ್ರಿಯವರು ಒಪ್ಪಿಕೊಂಡಿದ್ದಾರೆ ಎಂದು ಅವರು ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಎಚ್‌.ಕೆ. ಕುಮಾರಸ್ವಾಮಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಈಗಾಗಲೇ ಕೈಗಾರಿಕಾ ಜಮೀನು ಖರೀದಿ ಮಾಡಿದವರಿಗೆ ರಿಯಾಯ್ತಿ ಮೊತ್ತದ ಹಣ ಬಿಡುಗಡೆ ಆಗದೇ ಇರಲು ತಾಂತ್ರಿಕ ತೊಂದರೆಯೇ ಕಾರಣ. ಆದಷ್ಟು ಬೇಗ ಆ ಹಣವನ್ನು ಬಿಡುಗಡ ಮಾಡಲಾಗುವುದು. ಶೇ 50 ರಿಯಾಯ್ತಿ ಇದ್ದಾಗ ಜಾರಿಯಲ್ಲಿ ಇದ್ದ ಷರತ್ತುಗಳನ್ನೇ ಶೇ 75 ಕ್ಕೂ ಅನ್ವಯ ಮಾಡಲಾಗುತ್ತದೆ. ಪ್ರತ್ಯೇಕ ಷರತ್ತುಗಳನ್ನು ವಿಧಿಸುವುದಿಲ್ಲ ಎಂದು ಹೇಳಿದರು.

ADVERTISEMENT

ಎಚ್‌.ಕೆ.ಕುಮಾರಸ್ವಾಮಿ ಮತ್ತು ಎನ್‌.ಮಹೇಶ್‌ ಅವರು ಸರಳ ಷರತ್ತುಗಳು ಇರಬೇಕು ಎಂದು ಒತ್ತಾಯಿಸಿದರು.

ಬಿಪಿಎಲ್‌ ಕಾರ್ಡ್‌ಗೆ ಆನ್‌ಲೈನ್ ಮೂಲಕ ಅರ್ಜಿ:

ಬಿಪಿಎಲ್‌ ಕಾರ್ಡ್‌ ಪಡೆಯಲು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು ಎಂದು ಆಹಾರ ಸಚಿವ ಉಮೇಶ ಕತ್ತಿ ತಿಳಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸುವುದಕ್ಕೆ ತಡೆ ನೀಡಲಾಗಿತ್ತು. ಈಗ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವೇಳೆ ಸರ್ವರ್‌ನಲ್ಲಿ ಯಾವುದೇ ಸಮಸ್ಯೆ ಇದ್ದರೆ ಇದೇ 15 ರೊಳಗೆ ಸರಿಪಡಿಸಿ ಬಿಪಿಎಲ್‌ ಕಾರ್ಡ್‌ ವಿತರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.