ಪಟ್ನಾ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶೀ ಜೈರಾಮ್ ರಮೇಶ್ ಅವರು, ಪಕ್ಷವು ರಾಮಗಢದಲ್ಲಿ 1940ರಲ್ಲಿ ನಡೆಸಿದ ಅಧಿವೇಶವನ್ನು ಉಲ್ಲೇಖಿಸಿ ಆರ್‌ಎಸ್‌ಎಸ್ ಅನ್ನು ಟೀಕಿಸಿದ್ದಾರೆ.
8 ದಶಕಗಳ ಹಿಂದೆ ರಾಮಗಢದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸಂವಿಧಾನ ರಚನಾ ಸಮಿತಿ ರಚಿಸುವ ಸಂಬಂಧ ನಿರ್ಣಯ ಅಂಗೀಕರಿಸಲಾಗಿತ್ತು.
ಸದ್ಯ ಬಿಹಾರದ ಪಟ್ನಾದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ಸಂದರ್ಭದಲ್ಲಿ ಜೈರಾಮ್ ರಮೇಶ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್‌ನಲ್ಲಿ 1940ರ ಸಭೆಯನ್ನು ಸ್ಮರಿಸಿದ್ದಾರೆ.
1940ರ ಮಾರ್ಚ್‌ನಲ್ಲಿ ರಾಮಗಢದಲ್ಲಿ ನಡೆದ ಸಭೆಯಲ್ಲಿ, ಮುಕ್ತ ಮತ್ತು ಸ್ವತಂತ್ರ ಭಾರತಕ್ಕಾಗಿ ಸಂವಿಧಾನವನ್ನು ರಚಿಸಲು ಮತ್ತು ಅಂಗೀಕರಿಸಲು ಕಾಂಗ್ರೆಸ್ ಬದ್ಧವಾಗಿರುವ ಕುರಿತು ಸಿಡಬ್ಲ್ಯುಸಿ ಮೊದಲ ಬಾರಿಗೆ ಐತಿಹಾಸಿಕ ನಿರ್ಣಯವನ್ನು ಅಂಗೀಕರಿಸಿತ್ತು ಎಂದು ರಮೇಶ್ ಒತ್ತಿ ಹೇಳಿದ್ದಾರೆ.
'1949ರ ನವೆಂಬರ್ 26ರಂದು ಅಂಗೀಕಾರವಾಗಿ, 1950ರ ನವೆಂಬರ್ 26ರಂದು ಜಾರಿಗೆ ಬಂದಿರುವ ಸಂವಿಧಾನಕ್ಕೆ ಆಗ ವಿರೋಧ ವ್ಯಕ್ತಪಡಿಸಿದ್ದ ಸಂಘಟನೆ ಇದೀಗ ಶತಮಾನೋತ್ಸವ ಆಚರಿಸುತ್ತಿರುವುದೂ ಸೇರಿದಂತೆ ಉಳಿದೆಲ್ಲವೂ ಈಗ ಇತಿಹಾಸ' ಎನ್ನುವ ಮೂಲಕ ಆರ್‌ಎಸ್‌ಎಸ್‌ಗೆ ತಿವಿದಿದ್ದಾರೆ.
1940ರ ಸಿಡಬ್ಲ್ಯುಸಿ ಸಭೆಯಲ್ಲಿ 'ಸಂವಿಧಾನ ಸಭೆ ಮತ್ತು ನಮ್ಮ ಕನಸು' ಎಂದು ಕಿರುಹೊತ್ತಿಗೆ ಬಿಡುಗಡೆ ಮಾಡಲಾಗಿತ್ತು ಎಂದೂ ಹೇಳಿರುವ ರಮೇಶ್, 'ಅದು ಜೈ ಗೋಪಾಲ್ ನಾರಂಗ್ ಅವರದ್ದಾಗಿತ್ತು. ಅವರು, ಸುಮಾರು ಒಂದು ದಶಕಗಳ ವರೆಗೆ ಸಂವಿಧಾನ ರಚನಾ ಸಭೆಯನ್ನು ಪ್ರತಿಪಾದಿಸಿದ್ದರು' ಎಂದು ತಿಳಿಸಿದ್ದಾರೆ. ದೇಶದ ಮೊದಲ ಪ್ರಧಾನಿ, ದಿವಂಗತ ಜವಾಹರಲಾಲ್ ನೆಹರೂ ಅವರು ಬರೆದಿರುವ ಮುನ್ನುಡಿಯನ್ನೂ ಹಂಚಿಕೊಂಡಿದ್ದಾರೆ.
'ಮತಗಳ್ಳತನ' ಕುರಿತು ಚರ್ಚೆ
ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಮತಗಳ್ಳತನ ಆರೋಪ ಹಾಗೂ ಬಿಹಾರ ವಿಧಾನಸಭೆ ಚುನಾವಣೆ ಕಾರ್ಯತಂತ್ರದ ಕುರಿತು ಪಟ್ನಾ ಸಿಡಬ್ಲ್ಯುಸಿ ಸಭೆಯಲ್ಲಿ ಚರ್ಚೆಯಾಗಲಿದೆ.
ವಿಶೇಷ ಆಹ್ವಾನಿತರು, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ರಾಜ್ಯಗಳ ಕಾಂಗ್ರೆಸ್ ಘಟಕಗಳ ಅಧ್ಯಕ್ಷರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.