ADVERTISEMENT

ಜಲಜೀವನ್ ಮಿಷನ್: ರಾಜ್ಯಕ್ಕೆ ₹ 1,150 ಕೋಟಿ

3 ವರ್ಷದಲ್ಲಿ ಪೂರ್ಣ: 15 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ

​ಪ್ರಜಾವಾಣಿ ವಾರ್ತೆ
Published 20 ಮೇ 2020, 22:07 IST
Last Updated 20 ಮೇ 2020, 22:07 IST

ಬೆಂಗಳೂರು: ‘ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಲಾ ಶೇ 50ರ ಅನುದಾನದೊಂದಿಗೆ ಜಾರಿಗೊಳಿಸಲಾಗುತ್ತಿದ್ದು, ರಾಜ್ಯಕ್ಕೆ ₹1,150 ಕೋಟಿ ಅನುದಾನ ಮಂಜೂರಾಗಿದೆ. 2023ರೊಳಗೆ ಯೋಜನೆಯನ್ನುಪೂರ್ಣಗೊಳಿಸ ಬೇಕು’ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಹೇಳಿದರು.

ಯೋಜನೆ ಕುರಿತು ಬುಧವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ನಡೆಸಿದ ವಿಡಿಯೊ ಸಂವಾದದಲ್ಲಿ ಅವರು ಈ ವಿಷಯ ತಿಳಿಸಿದರು.

‘ಪ್ರಾರಂಭದಲ್ಲಿ ಈಗಾಗಲೇ ಜಲ ಮೂಲ ಲಭ್ಯವಿರುವ ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಿ’ ಎಂದು ಅವರು ಸೂಚಿಸಿದರು.

ADVERTISEMENT

‘ರಾಜ್ಯದಲ್ಲಿ 15 ಲಕ್ಷ ಕುಟುಂಬಗಳಿಗೆ ನಲ್ಲಿ ನೀರು ಸಂಪರ್ಕ ಜೋಡಿಸುವ ಗುರಿ ನಿಗದಿಪಡಿಸಲಾಗಿದ್ದು, 3 ವರ್ಷದೊಳಗೆ ಇದನ್ನು ಸಾಧಿಸಲಾಗುವುದು’ ಎಂದು ಮುಖ್ಯಮಂತ್ರಿ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ ಇದ್ದರು.

‘ಮೇಕೆದಾಟು ಯೋಜನೆಗೆ ಅನುದಾನ ನೀಡಿ’

‘ರಾಜ್ಯದಲ್ಲಿ ಮೇಕೆದಾಟು ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾಗಿದ್ದು, ಮೇಕೆದಾಟು ಯೋಜನೆಗೆ ಅಗತ್ಯವಿರುವ ₹ 9 ಸಾವಿರ ಕೋಟಿ ಅನುದಾನ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಕೋರಿದರು.‌

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದಕೇಂದ್ರ ಸಚಿವ ಗಜೇಂದ್ರ ಸಿಂಗ್, ‘ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಳನ್ನು ನೀವು ಕೈಗೆತ್ತಿಕೊಳ್ಳಿ. ಕೇಂದ್ರದಿಂದ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.