ADVERTISEMENT

ಉಗ್ರನ ಪರ ಸ್ಟೇಟಸ್‌; ಎಂಜಿನಿಯರ್ ವಿದ್ಯಾರ್ಥಿ ಸೆರೆ

ಜಮ್ಮು–ಕಾಶ್ಮೀರದ ಆರು ಯುವಕರ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 9:35 IST
Last Updated 17 ಫೆಬ್ರುವರಿ 2019, 9:35 IST
ತಾಹೀರ್ ಲತಿಫ್
ತಾಹೀರ್ ಲತಿಫ್   

ಬೆಂಗಳೂರು: ಪುಲ್ವಾಮಾದ ದಾಳಿಗೆ ಕಾರಣನಾದ ಉಗ್ರನನ್ನು ಬೆಂಬಲಿಸಿ ವಾಟ್ಸ್‌ಆ್ಯಪ್‌ ಸ್ಟೇಟಸ್‌ ಹಾಕಿಕೊಂಡಿದ್ದ ಎಂಜಿನಿಯರ್ ವಿದ್ಯಾರ್ಥಿ ತಾಹೀರ್ ಲತಿಫ್ (23) ಎಂಬಾತನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ಜಮ್ಮು–ಕಾಶ್ಮೀರದ ಬಾರಾಮುಲಾ ಜಿಲ್ಲೆಯ ನಿವಾಸಿ ತಾಹೀರ್, ನಗರದಕಟ್ಟಿಗೇನಹಳ್ಳಿಯ ರೇವಾ ಯೂನಿವರ್ಸಿಟಿಯ ವಿದ್ಯಾರ್ಥಿ. ಸಿವಿಲ್ ಎಂಜಿನಿಯರಿಂಗ್ ವಿಭಾಗದ 3ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ.

‘ತಾಹೀರ್ ವಿರುದ್ಧಯೂನಿವರ್ಸಿಟಿಯ ವಿದ್ಯಾರ್ಥಿಗಳು ದೂರು ನೀಡಿದ್ದರು. ಅಪರಾಧ ಸಂಚು, ದೇಶದ್ರೋಹ ಹಾಗೂಧರ್ಮ, ಜಾತಿ ಹೆಸರಿನಲ್ಲಿ ದ್ವೇಷ ಸೃಷ್ಟಿಸಲು ಯತ್ನ ಆರೋಪದಡಿ ಎಫ್‌ಐಆರ್‌ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

ಉಗ್ರನಿಗೆ ಸೆಲ್ಯೂಟ್‌ ಎಂದಿದ್ದ: ‘ದಾಳಿಗೂ ಮುನ್ನ ಉಗ್ರ ಚಿತ್ರೀಕರಿಸಿಕೊಂಡಿದ್ದ ವಿಡಿಯೊವನ್ನು ತನ್ನ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ ತಾಹೀರ್, ‘ಬಿಗ್ ಸೆಲ್ಯೂಟ್. ನಿನ್ನ ತ್ಯಾಗವನ್ನು ಅಲ್ಹಾಹ್ ಒಪ್ಪಿಕೊಳ್ಳುತ್ತಾನೆ. ನಿನಗೆ ದೊಡ್ಡ ಸ್ಥಾನವನ್ನೇ ಕೊಡುತ್ತಾನೆ #ಶಾಹೀದ್ ಆದಿಲ್ ಬಾಯ್ (ಉಗ್ರನ ಹೆಸರು)’ ಎಂದು ಬರೆದುಕೊಂಡಿದ್ದ’ಎಂದು ಪೊಲೀಸರು ತಿಳಿಸಿದರು.

‘ಆರೋಪಿಯ ಸ್ಟೇಟಸ್ ನೋಡಿದ್ದ ವಿದ್ಯಾರ್ಥಿಗಳು, ‘ಭಾರತದ ಪ್ರಜೆಯಾದ ತಾಹೀರ್, ಉಗ್ರನ ಪರ ಕಾಮೆಂಟ್ ಮಾಡಿದ್ದಾನೆ. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೃತ್ಯ ಎಸಗಿದ್ದಾನೆ. ದೇಶದ ಸಮಗ್ರತೆಗೆ ಧಕ್ಕೆ ಬರುವಂಥ ಕಾಮೆಂಟ್ ಮಾಡಿ ದೇಶದ್ರೋಹ ಎಸಗಿದ್ದಾನೆ’ ಎಂದು ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

ಮತ್ತೊಂದು ಎಫ್‌ಐಆರ್: ಬೆಂಗಳೂರಿನಲ್ಲಿ ನೆಲೆಸಿರುವ ಜಮ್ಮು–ಕಾಶ್ಮೀರದ ಆರು ಯುವಕರು, ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ. ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ‘ಕರ್ನಾಟಕ ಸಂಘಟನೆಗಳ ಒಕ್ಕೂಟ’ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದೆ.

‘ಅಬಿದ್ ಮಲ್ಲಿಕ್, ಅಬ್ದುಲ್ ಹನೀಫ್, ಸುಲ್ತಾನ್ ಅಹ್ಮದ್, ಸಲ್ಮಾನ್ ನಿಸಾರ್, ಅಮಿರ್ ಶರೀಫ್, ಉಮೇರ್ ಗಾಂಝಿ ಉಗ್ರರ ಕೃತ್ಯವನ್ನು ಬೆಂಬಲಿಸಿ ‘ನಿಜವಾದ ಸರ್ಜಿಕಲ್ ಸ್ಟ್ರೈಕ್ ’ ಎಂದು ಹೊಗಳಿ ದೇಶದ್ರೋಹ ಎಸಗಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ’ ಎಂದು ಒಕ್ಕೂಟ ಒತ್ತಾಯಿಸಿದೆ.

ಎಫ್ಐಆರ್‌ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.