ADVERTISEMENT

ಸಾಹಿತ್ಯ ಸಮ್ಮೇಳನ: ಕನ್ನಡ ಪರಂಪರೆ ಅವಗಣನೆ: ಚಿಂತಕರು

ಜನ ಸಾಹಿತ್ಯ ಸಮ್ಮೇಳನಕ್ಕೆ ಚಿಂತಕರು, ಬರಹಗಾರರ ಬೆಂಬಲ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 16:01 IST
Last Updated 4 ಜನವರಿ 2023, 16:01 IST

ಬೆಂಗಳೂರು: ‘ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ಪರಂಪರೆ ಹಾಗೂ ಅಲ್ಪಸಂಖ್ಯಾತರ ಅವಗಣನೆಯ ಉದ್ದೇಶ ಹೊಂದಿದೆ’ ಎಂದು ಆರೋಪಿಸಿರುವ ಚಿಂತಕರು ಹಾಗೂ ಬರಹಗಾರರು, ಜನ ಸಾಹಿತ್ಯ ಸಮ್ಮೇಳನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕೆ.ಮರುಳಸಿದ್ದಪ್ಪ, ಎಸ್.ಜಿ.ಸಿದ್ಧರಾಮಯ್ಯ, ಜಿ.ರಾಮಕೃಷ್ಣ, ರಾಜೇಂದ್ರ ಚೆನ್ನಿ, ವಿಜಯಾ, ಬಂಜಗೆರೆ ಜಯಪ್ರಕಾಶ್, ವಿಮಲಾ.ಕೆ.ಎಸ್., ಎನ್. ಗಾಯತ್ರಿ, ಬಿ.ಶ್ರೀಪಾದ ಭಟ್, ಎನ್.ಆರ್.ವಿಶುಕುಮಾರ್, ಸುರೇಂದ್ರ ರಾವ್, ಕೆ.ನೀಲಾ, ಮೀನಾಕ್ಷಿ ಬಾಳಿ ಹಾಗೂ ಬಿ.ಎನ್.ಯೋಗಾನಂದ ಅವರು ಜಂಟಿ ಹೇಳಿಕೆ ನೀಡಿದ್ದಾರೆ.

‘ಪ್ರಜಾಪ್ರಭುತ್ವವಾದೀ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನಗಳು ಸತತವಾಗಿ ನಡೆಯುತ್ತಿವೆ. ಇದಕ್ಕೆ ಸಮಾನಾಂತರವಾಗಿ ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ಕರ್ನಾಟಕದಲ್ಲಿ ಬೆಂಬಲಿತವಾದ ಆಕ್ರಮಣಗಳು ನಡೆದಿವೆ. ಈ ಬಾರಿಯ ಸಾಹಿತ್ಯ ಸಮ್ಮೇಳನವನ್ನು ಇಂಥದ್ದೇ ದುರುದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ ಎನ್ನುವುದರ ಬಗ್ಗೆ ನಮಗೆ ಸಂದೇಹವಿಲ್ಲ. ನಮ್ಮ ದೃಷ್ಟಿಯಲ್ಲಿ ಸಾಹಿತ್ಯವು ಯಾವಾಗಲೂ ಪ್ರಜಾಪ್ರಭುತ್ವವಾದಿ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ’ ಎಂದು ಹೇಳಿದ್ದಾರೆ.

ADVERTISEMENT

‘ಬರಹಗಾರರ ಆಕ್ಷೇಪಣೆಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷರು ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ ಎಂದು ನಿರೀಕ್ಷಿಸಿರಲೂ ಇಲ್ಲ. ಅವರು ಉಡಾಫೆ, ಸ್ವಸಮರ್ಥನೆ, ಸುಳ್ಳುಗಳಿಂದ ಕೂಡಿದ ಹೇಳಿಕೆಗಳನ್ನು ನೀಡಿದ್ದಾರೆ. ಪ್ರಗತಿಪರರನ್ನು ಹೀಯಾಳಿಸಿದ್ದಾರೆ. ಬಲಪಂಥೀಯ ಧೋರಣೆಗೆ ಅನುಗುಣವಾಗಿ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ತಾವೇ ಕನ್ನಡದ ಏಕೈಕ ಪ್ರತಿನಿಧಿ ಎನ್ನುವ ಮಾನಸಿಕ ವಿಕಲ್ಪವನ್ನು ತೋರಿಸಿದ್ದಾರೆ. ತಮ್ಮ ಕುತ್ಸಿತ ಹಾಗೂ ಅಲ್ಪಮತೀಯ ಆರ್ಭಟದ ಮಾತುಗಳಿಂದ ಬರಹಗಾರರು ಹೆದರಿ ಹಿಂದೆ ಸರಿಯುತ್ತಾರೆ ಎನ್ನುವ ಭ್ರಮೆಯಲ್ಲಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕರ್ನಾಟಕದ ಜನಸಾಮಾನ್ಯರು ಕಟ್ಟಿದ ಸಾಹಿತ್ಯ ಪರಿಷತ್ತನ್ನು ಮನುಷ್ಯ ವಿರೋಧೀ ಸಿದ್ಧಾಂತ ಹಾಗೂ ಕ್ರಿಯೆಗಳಿಂದ ಶುದ್ಧಗೊಳಿಸಿ, ಕನ್ನಡ ಪರಂಪರೆಯ ಬಹುತ್ವ, ಜಾತ್ಯಾತೀತ, ಧರ್ಮಾತೀತ, ಮಾನವೀಯ ಕಾಳಜಿಗಳನ್ನು ಹೊಂದಿದ ಸಂಸ್ಥೆಯಾಗಿ ಮುಂದುವರೆಯುವಂತೆ ಕಾಪಾಡಲು ಬರಹಗಾರರು ಸನ್ನದ್ಧರಾಗಿದ್ದಾರೆ. ಅಧ್ಯಕ್ಷರ ಹೇಳಿಕೆಗಳನ್ನು ಅತ್ಯಂತ ಮರುಕ ಹಾಗೂ ಕರುಣೆಯಿಂದ ನಾವು ಗಮನಿಸಿದ್ದೇವೆ. ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರು ಕಸಾಪ ಜಾತ್ಯತೀತ ಸಂಸ್ಥೆಯಾಗಿ ಉಳಿಸಲು ಮುಂದಾಗಬೇಕು’ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.