ADVERTISEMENT

ಹನುಮಂತಮ್ಮನವರ ಮನೆಗೆ ಭೇಟಿ ನೀಡಿ ಇಡ್ಲಿ, ಉಪ್ಪಿಟ್ಟು ಸವಿದ ಬಿಎಸ್‌ವೈ, ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2022, 12:31 IST
Last Updated 13 ಅಕ್ಟೋಬರ್ 2022, 12:31 IST
   

ಹೂವಿನಹಡಗಲಿ (ವಿಜಯನಗರ): ತಾಲ್ಲೂಕಿನ ಹಿರೇಹಡಗಲಿಯ ದಲಿತ ಕಾಲೊನಿಯಲ್ಲಿರುವ ನವಲಿ ಹನುಮಂತಮ್ಮನವರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆದ ಶಾಸಕ ಬಿ.ಎಸ್.ಯಡಿಯೂರಪ್ಪ ಇತರೆ ಗಣ್ಯರು ಗುರುವಾರ ಭೇಟಿ ನೀಡಿ ಉಪಾಹಾರ ಸೇವಿಸಿದರು.

ಕೂಲಿ ಕಾರ್ಮಿಕ ಮಹಿಳೆ ಹನುಮಂತಮ್ಮನವರ ಮನೆಗೆ ತೆರಳಿದ ಮುಖ್ಯಮಂತ್ರಿ, ಕುಟುಂಬದ ಸದಸ್ಯರ ಮಾಹಿತಿ ಪಡೆದು ಕುಶಲೋಪರಿ ವಿಚಾರಿಸಿದರು. ಇಕ್ಕಾಟ್ಟಾದ ಆಶ್ರಯ ಮನೆಯಲ್ಲಿ ಗಣ್ಯರ ಉಪಾಹಾರಕ್ಕಾಗಿ ಕುರ್ಚಿ, ಊಟದ ಟೇಬಲ್ ವ್ಯವಸ್ಥೆ ಮಾಡಲಾಗಿತ್ತು.

ಹನುಮಂತಮ್ಮ ಉಪಾಹಾರಕ್ಕಾಗಿ ಇಡ್ಲಿ, ಸಾಂಬರ್, ಚಟ್ನಿ, ಕೇಸರಿಬಾತ್, ಉಪ್ಪಿಟ್ಟು ತಯಾರಿಸಿದ್ದರು. ಅವರ ಪುತ್ರಿ ರೂಪಾ ಗಣ್ಯರಿಗೆ ಉಪಾಹಾರ ಬಡಿಸಿದರು. ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಹಾಗೂ ಸಚಿವರು ಇಡ್ಲಿ, ಚಟ್ನಿ, ಸಾಂಬರ್ ಸವಿದರು.

ಉಪಾಹಾರ ಮುಗಿಸಿದ ಮೇಲೆ ಯಡಿಯೂರಪ್ಪ ಮನೆಯ ತಗಡಿನ ಮೇಲ್ಛಾವಣಿಯನ್ನೇ ದಿಟ್ಟಿಸಿ ನೋಡಿ, ‘ಇವರಿಗೆ ಆಶ್ರಯ ಯೋಜನೆಯಲ್ಲಿ ಮನೆ ಮಂಜೂರು ಮಾಡಿಸಿಕೊಡಿ’ ಎಂದು ಹೇಳಿದಾಗ, ಸಿಎಂ ಅಧಿಕಾರಿಗಳನ್ನು ಕರೆದು, ಮನೆ ಮಂಜೂರಾತಿಯ ಸೂಚನೆ ನೀಡಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಪ್ರವಾಸೋದ್ಯಮ ಸಚಿವ ಆನಂದಸಿಂಗ್, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ವೈ.ದೇವೇಂದ್ರಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮುಖಂಡರಾದ ಪಿ.ವಿಜಯಕುಮಾರ್, ಹನುಮಂತಪ್ಪ ಇದ್ದರು.

ಇದನ್ನೂ ಓದಿ:

‘ಯಡಿಯೂರಪ್ಪ, ಬೊಮ್ಮಾಯಿ ಸಾಹೇಬ್ರನ್ನು ಟೀವಿಯಲ್ಲಿ ನೋಡ್ತಾ ಇದ್ವಿ. ಅವರು ನಮ್ಮ ಮನೆಗೆ ಬಂದದ್ದು ಸಾಕ್ಷತ್ ದೇವರೇ ಮನೆಗೆ ಬಂದಂಗ ಆತು. ನಮ್ಮ ಮನೆಯಲ್ಲಿ ನಾಷ್ಟಾ ಮಾಡಿದ್ದು ಬಾಳಾ ಸಂತೋಷ ಆಗೇತಿ’ ಎಂದು ಹನುಮಂತಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.