ADVERTISEMENT

ಸಿದ್ದರಾಮಯ್ಯರಿಂದ ಕಾಂಗ್ರೆಸ್‌ಗೆ ಲಾಭವಾಗಿಲ್ಲ, ದೊಡ್ಡ ಪೆಟ್ಟು ಬಿದ್ದಿದೆ: ಪೂಜಾರಿ

‘ಪ್ರಿಯಾಂಕ ರಾಜಕೀಯಕ್ಕೆ ಪ್ರವೇಶ ಪ್ರಧಾನಿ ಮೋದಿ ನಿದ್ದೆಗೆಡಿಸಿದೆ’

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 11:30 IST
Last Updated 24 ಜನವರಿ 2019, 11:30 IST
ಸಿದ್ದರಾಮಯ್ಯ ಹಾಗೂ ಜನಾರ್ದನ ಪೂಜಾರಿ
ಸಿದ್ದರಾಮಯ್ಯ ಹಾಗೂ ಜನಾರ್ದನ ಪೂಜಾರಿ   

ಮಂಗಳೂರು: ಪ್ರಿಯಾಂಕಾ ಗಾಂಧಿ ವಾದ್ರಾ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶ ಪಡೆದಿರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿದ್ದೆಗೆಡಿಸಿದಂತಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ಜನಾರ್ದನ ಪೂಜಾರಿ ಹೇಳಿದರು.

ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ದೇಶದ ಜನ ಇಂದಿರಾ ಗಾಂಧಿಯವರನ್ನು ಪ್ರಿಯಾಂಕಾ ಗಾಂಧಿ ಅವರಲ್ಲಿ ಕಾಣುತ್ತಿದ್ದಾರೆ. ಬರುವ ದಿನಗಳಲ್ಲಿ ರಾಷ್ಟ್ರ ರಾಜಕಾರಣದ ಸಂಪೂರ್ಣ ಚಿತ್ರಣ ಬದಲಾಗಲಿದೆ. ಕಾಂಗ್ರೆಸ್ಸಿಗೆ ಹೊಸ ಹುಮ್ಮಸ್ಸು ಬಂದಿದೆ. ಪ್ರಿಯಾಂಕಾ ಗಾಂಧಿಯವರು ಒಬ್ಬ ಸಮರ್ಥ ನಾಯಕಿಯಾಗಿ ಪಕ್ಷದ ಪರ ಕೆಲಸ ಮಾಡಲಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ರಾಹುಲ್ ಗಾಂಧಿಯವರಿಗೆ ಮತ್ತಷ್ಟು ಬಲ ಬಂದಂತಾಗಿದೆ’ ಎಂದು ಪೂಜಾರಿ ಹೇಳಿದರು.

ADVERTISEMENT

‘ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡುವ ಉದ್ದೇಶದಿಂದಲೇ ಬಂದಿದ್ದಾರೆ. ಪಕ್ಷಕ್ಕೆ ಯಾವುದೇ ಲಾಭವಾಗಿಲ್ಲ. ಬದಲಾಗಿ ಪಕ್ಷಕ್ಕೆ ಪೆಟ್ಟು ಬಿದ್ದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ನೀಡಿದರೆ ಸ್ಪರ್ಧಿಸುತ್ತೇನೆ. ಶೀಘ್ರವೇ ದೆಹಲಿಗೆ ಹೋಗಿ ಪಕ್ಷದ ಮುಖಂಡರನ್ನು ಭೇಟಿ ಮಾಡಲಿದ್ದೇನೆ. ಪಕ್ಷ ನನಗೆ ಟಿಕೆಟ್ ನೀಡದಿದ್ದರೆ ಯಾರಿಗೆ ನೀಡಿದರು ಕೂಡ ಪಕ್ಷದ ಪರವಾಗಿ ಮಾಡುವ ಕೆಲಸ ಮಾಡುತ್ತೇನೆ. ಐವಾನ್ ಡಿಸೋಜಾ ಅವರಿಗೆ ಯಾವುದೇ ಕಾರಣಕ್ಕೂ ಪಕ್ಷವು ಟಿಕೆಟ್ ನೀಡಲಿಲ್ಲ. ಅವರಿಗೆ ಎಲ್ಲವೂ ಬೇಕು ಎಂಬ ಆಸೆ ಇದೆ. ಮೊದಲು ಅದನ್ನು ಅವರು ಬಿಡಬೇಕು’ ಎಂದು ಹೇಳಿದರು.

ರಾಜ್ಯದಲ್ಲಿ ಸಮಿಶ್ರ ಸರ್ಕಾರ ಸುಭದ್ರವಾಗಿದ್ದು. ಸರ್ಕಾರದ ರಕ್ಷಕರಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೆಲಸ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಅವರು ಸಮ್ಮಿಶ್ರ ಸರ್ಕಾರದ ರಕ್ಷಣೆಗೆ ಇದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.