ADVERTISEMENT

ಎರಡೂವರೆ ವರ್ಷ ನೀವೇ ಇರಿ, ಡಿಕೆಶಿ ಬೇಡ: ಜನಾರ್ದನ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 16:14 IST
Last Updated 29 ಜನವರಿ 2026, 16:14 IST
<div class="paragraphs"><p>ಜನಾರ್ದನ ರೆಡ್ಡಿ</p></div>

ಜನಾರ್ದನ ರೆಡ್ಡಿ

   

ಬೆಂಗಳೂರು: ‘ನೀವೇ ಇನ್ನೂ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಿರಿ. ಡಿ.ಕೆ.ಶಿವಕುಮಾರ್‌ ಆ ಸ್ಥಾನಕ್ಕೆ ಬರುವುದು ಬೇಡ. ಬಳ್ಳಾರಿ ಜಿಲ್ಲೆಯ ಒಳಿತಿಗಾಗಿ ಉತ್ತಮ ಅಧಿಕಾರಿಗಳನ್ನು ನಿಯೋಜಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿಯ ಜಿ.ಜನಾರ್ದನ ರೆಡ್ಡಿ ಮನವಿ ಮಾಡಿದರು.

‘ಗಣಿ ವಿಚಾರವಾಗಿ ನೀವು ನನ್ನ ವಿರುದ್ಧ ಪಾದಯಾತ್ರೆ ನಡೆಸಿ ಹೋರಾಟ ಮಾಡಿದ್ದೀರಿ. ವಿರೋಧಪಕ್ಷದ ನಾಯಕರಾಗಿ ನಿಮ್ಮ ಕೆಲಸ ಮಾಡಿದ್ದೀರಿ. ನಾನು ಜೈಲಿಗೆ ಹೋದೆ. ಆ ಬಳಿಕ ಆಯ್ಕೆ ಆಗಿ ಬಂದೆ. ಎಲ್ಲವೂ ನನ್ನ ಹಣೆ ಬರಹ’ ಎಂದರು.

ADVERTISEMENT

‘ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆದುಕೊಂಡ ರೀತಿ ನೋಡಿದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಏರಲು ಭಗವಂತ ಅವರಿಗೆ ಅವಕಾಶ ಮಾಡಿಕೊಡಬಾರದು’ ಎಂದು ಕಿಡಿಕಾರಿದರು.

‘ನನ್ನ ಮನೆ ಸುಟ್ಟು ಹಾಕುತ್ತೇನೆ, ನನ್ನನ್ನು ಕೊಂದು ಹಾಕುತ್ತೇನೆ ಎಂದು ಹೇಳಿದ ಶಾಸಕ ಭರತ್‌ ರೆಡ್ಡಿಯನ್ನು ಶಿವಕುಮಾರ್ ಸಮರ್ಥಿಸಿಕೊಂಡರು. ಅವರ ಜತೆ ನಿಲ್ಲುವುದಾಗಿ ಹೇಳಿದರು. ಅಲ್ಲದೇ, ನಿಮಗೆ ರಕ್ಷಣೆ ಬೇಕಿದ್ದರೆ ಟ್ರಂಪ್‌ ಬಳಿ ಹೋಗಿ, ಇರಾನ್‌ನಿಂದ ರಕ್ಷಣೆ ಪಡೆಯಿರಿ, ಬಿಜೆಪಿಯ 1500 ಕಾರ್ಯಕರ್ತರನ್ನು ರಕ್ಷಣೆ ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ವ್ಯಕ್ತಿ ಆಡುವ ಮಾತಾ ಇದು’ ಎಂದು ರೆಡ್ಡಿ ಪ್ರಶ್ನಿಸಿದರು.

‘ನನ್ನ ಮೇಲೆ ಗುಂಡು ಹಾರಿಸಿದ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಅಥವಾ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಸಾಧ್ಯವಿಲ್ಲ ಎಂದಾದರೆ ನಾನೇ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.