
ಬೆಂಗಳೂರು: ‘ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ಕೇವಲ ಇಬ್ಬರ ನಡುವೆ ಗಲಾಟೆ ನಡೆದಿದೆ. ಅದಕ್ಕಾಗಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಪಾದಯಾತ್ರೆ ನಡೆಸುತ್ತಿರುವುದು ಹಾಸ್ಯಾಸ್ಪದ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ವ್ಯಂಗ್ಯವಾಡಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇದೆಲ್ಲ ಜನರಿಗೆ ಅರ್ಥವಾಗುತ್ತದೆ. ಲೂಟಿ ಮಾಡಿದವರಿಗೆ ಜನರೇ ಬುದ್ಧಿ ಕಲಿಸುತ್ತಾರೆ’ ಎಂದರು.
‘ಅಧಿಕಾರ ಮತ್ತು ಹಣದ ದುರಾಸೆಯಿಂದ ಈ ಹಿಂದೆ ಶಾಸಕ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅಕ್ರಮ ಗಣಿಗಾರಿಕೆ ನಡೆಸಿ ರಾಜ್ಯದ ಗಡಿ ಗುರುತನ್ನೇ ಕಿತ್ತು ಹಾಕಿ, ದೇವಾಲಯವನ್ನೂ ನಾಶಪಡಿಸಿದ್ದರು. ಅಲ್ಲದೆ, ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ದರು. ಗಣಿಗಾರಿಕೆ ನಡೆಸುವವರಿಂದ ಪಾಲು ಪಡೆದಿದ್ದರು’ ಎಂದು ಪಾಟೀಲ ಆರೋಪಿಸಿದರು.
‘ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಹಲವರು ಪಾದಯಾತ್ರೆ ಮಾಡುತ್ತಾರೆ. ಆದರೆ, ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. ಅದಕ್ಕೆ ಪಾದಯಾತ್ರೆಗೆ ಮುಂದಾಗಿರುವುದು ಸರಿಯಲ್ಲ’ ಎಂದರು.
‘ನರೇಗಾ ವಿಷಯದ ಬಗ್ಗೆ ಚರ್ಚಿಸಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದಿನ ನಿಗದಿಪಡಿಸಲಿ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಾವು ಒಪ್ಪಿಸುತ್ತೇವೆ. ರಾಷ್ಟ್ರೀಯ ಹಾಗೂ ರಾಜ್ಯ ಮಾಧ್ಯಮಗಳ ಮುಂದೆ ಚರ್ಚಿಸಲಿ. ಎಚ್.ಡಿ. ಕುಮಾರಸ್ವಾಮಿ ಅವರನ್ನು ಬಿಜೆಪಿ ಹಾಗೂ ಜೆಡಿಎಸ್‌ನವರು ಚರ್ಚೆಗೆ ಒಪ್ಪಿಸಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.