ಜನಾರ್ದನ ರೆಡ್ಡಿ, ಶ್ರೀರಾಮುಲು
‘ಕೊಲೆಗೆ ಸಂಚು ಮಾಡಿದ್ದ ಶ್ರೀರಾಮುಲು’
ಬೆಂಗಳೂರು: ‘ಕಳೆದ 14 ವರ್ಷಗಳಲ್ಲಿ ಶ್ರೀರಾಮುಲು ಹಲವು ವಿಚಾರಗಳನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ. ಮಾತನಾಡಲು ಬಹಳಷ್ಟು ವಿಚಾರಗಳು ಇವೆ. ಏಜೆನ್ಸಿಗಳು ತನಿಖೆ ಮಾಡಿದರೆ ಸಾಕಷ್ಟು ಸಂಗತಿ ಬಯಲಿಗೆ ಬರುತ್ತವೆ. ಅವುಗಳ ಬಗ್ಗೆ ಈಗ ಮಾತನಾಡುವುದಿಲ್ಲ. ಸಮಯ ಬಂದಾಗ ಮಾತನಾಡುತ್ತೇನೆ’ ಎಂದು ಜನಾರ್ದನ ರೆಡ್ಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘1991ರಲ್ಲಿ ರಾಮುಲು ಅವರ ಮಾವ ರೈಲ್ವೆಬಾಬು ಕೊಲೆ ಆದಾಗ ಶತ್ರುಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮಚ್ಚು, ಲಾಂಗು ಮತ್ತಿತರ ಮಾರಕಾಸ್ತ್ರಗಳನ್ನು ಹಿಡಿದ ಶ್ರೀರಾಮುಲು 40 ಮಂದಿ ಜತೆ ಪ್ರತೀಕಾರಕ್ಕೆ ಹೊರಟಿದ್ದರು. ಮುಂದೆ ಆಗಬಹುದಾದ ಅನಾಹುತಗಳನ್ನು ಮನಗಂಡು ಅವರನ್ನು ತಡೆದೆ. ರಾಮುಲು ಜೀವಕ್ಕೂ ಬೆದರಿಕೆ ಇತ್ತು. ಹೀಗಾಗಿ ಅವರನ್ನು ಕಾಪಾಡಿದ್ದೆ. ಅವರನ್ನು ಸನ್ಮಾರ್ಗಕ್ಕೆ ತಂದಿದ್ದೆ’ ಎಂದರು.
‘ಆದರೆ, ಮತ್ತೊಮ್ಮೆ ಅವರು ಸೂರ್ಯನಾರಾಯಣ ರೆಡ್ಡಿ ಕೊಲೆಗೆ ಸಂಚು ಮಾಡಿದ್ದು ಗೊತ್ತಾಗಿ ಅದನ್ನು ತಡೆದೆ. ಒಮ್ಮೆ ಅಪರಾಧ ಮಾಡಿದರೆ ಅದೇ ಮಾರ್ಗ ಹಿಡಿಯುತ್ತಾರೆ ಎಂದು ಬುದ್ದಿವಾದ ಹೇಳಿದ್ದೆ. ಅದೇ
ನಾನು ಮಾಡಿದ ತಪ್ಪು’ ಎಂದು ಹೇಳಿದರು.
‘2004 ರಲ್ಲಿ ಬಳ್ಳಾರಿಯಲ್ಲಿ ಕಾರ್ಪೊರೇಟರ್ ಒಬ್ಬರ ಕೊಲೆ ಆಯಿತು. ಆಗ ರಾಮುಲು ಮೊದಲ ಬಾರಿಗೆ ಶಾಸಕರಾಗಿದ್ದರು. ಕೊಲೆ ಆರೋಪ ಅವರ ಮೇಲೆ ಬಂದಿತು. ಆದರೆ ಆ ಕೊಲೆಯನ್ನು ಹಣ ಕೊಟ್ಟು ಮಾಡಿಸಿದ್ದು ಬೇರೆಯವರು. ಆ ಇಬ್ಬರ ವಿರುದ್ಧ ಆರೋಪ ಮಾಡಿದಾಗ ಅವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದರು’ ಎಂದರು.
‘ನಾನು ನನ್ನ ಸ್ನೇಹಿತನಿಗೆ ದ್ರೋಹ ಮಾಡಿದೆ, ಅವಮಾನ ಮಾಡಿದೆ ಎಂದು ಶ್ರೀರಾಮುಲು ಬಳ್ಳಾರಿಯಮ್ಮ ದೇವಿ ಬಳಿ ಹೋಗಿ ಕಣ್ಣೀರು ಹಾಕಲಿ. ಕರ್ಮ ಯಾರನ್ನೂ ಬಿಡುವುದಿಲ್ಲ. ರಾಮುಲು ನನ್ನ ವಿರುದ್ಧ ಸ್ವಾಮಿ ದ್ರೋಹ, ಆಸ್ತಿ ದ್ರೋಹ ಮತ್ತು ಮಾತೃ ದ್ರೋಹ ಮಾಡಿದ್ದಾರೆ. ನನ್ನ ಕುರಿತು ವೆಬ್ ಸೀರೀಸ್ ಬರುತ್ತಿದ್ದು, ಅದರಲ್ಲಿ ಶ್ರೀರಾಮುಲು ಪಾತ್ರವೂ ಇದೆ. ಇದನ್ನು ಎಲ್ಲರೂ ನೋಡಿ’ ಎಂದು ಜನಾರ್ದನ ರೆಡ್ಡಿ ಹೇಳಿದರು.
ಪಕ್ಷದಲ್ಲಿ ಗೊಂದಲ ಇರುವುದು ನಿಜ. ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಶ್ರೀರಾಮುಲು ಅವರೊಂದಿಗೆ ನಾನು ಹಾಗೂ ಬಸವರಾಜ ಬೊಮ್ಮಾಯಿ ಚರ್ಚಿಸಲಿದ್ದೇವೆಆರ್.ಅಶೋಕ, ವಿರೋಧ ಪಕ್ಷದ ನಾಯಕ
ಬಿಜೆಪಿಯಲ್ಲಿ ಪ್ರಜಾಪ್ರಭುತ್ವವಿದೆ ಹೊರತು ಭಿನ್ನಮತವಿಲ್ಲ. ನಮ್ಮ ಪಕ್ಷ ಮನೆ ಇದ್ದಂತೆ. ಅಣ್ಣ ತಮ್ಮಂದಿರ ಜಗಳ ಸಹಜ. ಒಳ ಜಗಳವನ್ನು ಹಿರಿಯರು ಚರ್ಚಿಸಿ, ಬಗೆಹರಿಸುವರುಬಸವರಾಜ ಬೊಮ್ಮಾಯಿ, ಸಂಸದ
ರಾಜ್ಯ ಘಟಕದೊಳಗಿನ ಬೆಳವಣಿಗೆಗಳು ನನಗೂ, ಕಾರ್ಯಕರ್ತರಿಗೂ ಸಂತೋಷ ತಂದಿಲ್ಲ. ಯಡಿಯೂರಪ್ಪ ಅವರಂತಹ ಹೋರಾಟಗಾರರ ಬಗ್ಗೆ ಕೆಲವು ಮುಖಂಡರು ಅಪಮಾನ ಮಾಡುವ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಕಾರ್ಯಕರ್ತರು ನೊಂದಿದ್ದಾರೆಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
‘ಜನಾರ್ದನ ರೆಡ್ಡಿ ಅವರೇನು ಸಾಚಾನಾ?’
ಬಳ್ಳಾರಿ: ‘ನನ್ನನ್ನು ಕ್ರಿಮಿನಲ್ ಎನ್ನುತ್ತಿರುವ ಜನಾರ್ದನ ರೆಡ್ಡಿ ಅವರೇನು ಸಾಚಾನಾ? ನನ್ನ ಬಳಿ ಅವರ ದಾಖಲೆಗಳಿವೆ. ಎಪಿಸೋಡ್‌ಗಳಲ್ಲಿ ನನ್ನ ಕತೆ ಹೇಳುವುದಾಗಿ ಅವರು ಹೇಳುತ್ತಿದ್ದಾರೆ. ಅವರ ಕತೆಯನ್ನು ಎರಡು ಮೂರು ಎಪಿಸೋಡ್‌ಗಳಲ್ಲಿ ಹೇಳಿ ಸಿಲುಕಿಸಿಬಿಡುವೆ. ಅವರ ಕೃತ್ಯಗಳ ದಾಖಲೆಗಳಿವೆ’ ಎಂದು ಶ್ರೀರಾಮುಲು ಹೇಳಿದರು.
‘ದಾರೀಲಿ ಹೋಗುವವರು ನನ್ನನ್ನು ಬೆಳೆಸಿದ್ದೇನೆ ಎನ್ನುತ್ತಿದ್ದಾರೆ. ನಮ್ಮದು ರಾಜಕೀಯದ ಕುಟುಂಬ. ನನ್ನ ಬಳಿ ಏನೂ ಇರಲಿಲ್ಲ ಎಂಬುದು ಸುಳ್ಳು. ನನ್ನ ಸೋದರ ಮಾವ ರೈಲ್ವೆ ಬಾಬು ರಾಜೀವ್ ಗಾಂಧಿಯೊಂದಿಗೆ ಮಾತನಾಡುತ್ತಿದ್ದರು. ಆ ಕಾಲಕ್ಕೆ ಅವರು ವಿಧಾನಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ನಮ್ಮ ಅಜ್ಜಿಯೂ ರಾಜಕಾರಣದಲ್ಲಿ
ದ್ದರು. ಅವರ ಬಳಿಕ ರಾಜಕೀಯಕ್ಕೆ ಬಂದ ನಾನು ಫ್ಯೂಡಲ್ ವ್ಯವಸ್ಥೆ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇನೆ. ಯಾರದ್ದೋ ಕೃಪಾ ಕಟಾಕ್ಷದಿಂದ ಗೆದ್ದವನಲ್ಲ’ ಎಂದರು.
‘ಕೊಲೆ ಪ್ರಕರಣಗಳನ್ನು ಉಲ್ಲೇಖಿಸಿ ಮಾತನಾಡುತ್ತಿರುವ ಜನಾರ್ದನ ರೆಡ್ಡಿ, ಮಾಜಿ ಸಚಿವ ದಿವಾಕರ ಬಾಬು, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರನ್ನು ಸುಮ್ಮನೆ ಎಳೆ ತಂದು ಚೆನ್ನಾಗಿ ಸಂಬಂಧ ಕಲ್ಪಿಸಿದ್ದಾರೆ. ನಾನು ಸೂರ್ಯನಾರಾಯಣ ರೆಡ್ಡಿ ಜತೆಗೆ ಈಗಲೂ ಚೆನ್ನಾಗಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
‘ಎಲ್ಲರನ್ನೂ ಮುಗಿಸುವ ಚಾಳಿ ಜನಾರ್ದನ ರೆಡ್ಡಿ ಅವರದ್ದು. ಅವರದ್ದು ಸಣ್ಣ ಮನಸ್ಥಿತಿ. ನನ್ನಿಂದ ಅವರು, ಅವರಿಂದ ನಾನು ಬೆಳೆಯಲು ಆಗದು. ಅವರಿಂದ ಬೆಳೆದಿದ್ದೇನೆ ಎಂದರೆ ಜನ ನಂಬುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದ್ದು, ಮೋದಿ ಪ್ರಧಾನಿ ಆಗಿದ್ದು, ಮುಂದೆ ಬಿಜೆಪಿ ಸರ್ಕಾರ ಬರುವುದು ನನ್ನಿಂದಲೇ ಎಂದೂ ಜನಾರ್ದನ ರೆಡ್ಡಿ ಹೇಳುತ್ತಾರೆ. ಇದು ಅದು ಅವರ ಸಂಸ್ಕೃತಿ’ ಎಂದು ವ್ಯಂಗ್ಯವಾಡಿದರು.
‘ಪಕ್ಷದ ಒಳಗಿನ ಮುನಿಸುಗಳು ಕ್ಷಣಿಕ. ಆದರೆ, ನಮ್ಮಿಬ್ಬರ ನಡುವಿನ ಈ ಮುನಿಸು ಶಾಶ್ವತ. ಮನಸ್ಸುಗಳು ಒಡೆದು ಹೋದ ಮೇಲೆ ಜೋಡಿಸುವುದು ಕಷ್ಟ’ ಎಂದೂ ಹೇಳಿದರು.
‘ಜನಾರ್ದನ ರೆಡ್ಡಿ 14 ವರ್ಷ ಬಳ್ಳಾರಿಯಲ್ಲಿ ಇರಲಿಲ್ಲ. ಆಗ ಪ್ರಾಮಾಣಿಕವಾಗಿ ಜಿಲ್ಲೆಯಲ್ಲಿ ಪಕ್ಷದ ಪರ ಕೆಲಸ ಮಾಡಿದ್ದೇನೆ. ರೆಡ್ಡಿ ಒಂದು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದರು. ಒಂದು ಬಾರಿ ಸಚಿವರಾಗಿದ್ದರು. ಈ ಬಾರಿ ಶಾಸಕರಾಗಿದ್ದಾರೆ. ಆದರೆ, ನಾನು ಆರು ಬಾರಿ ಗೆದ್ದಿದ್ದೇನೆ. ಸ್ವಂತ ಪಕ್ಷ ಕಟ್ಟಿದ್ದೇನೆ. ಪಕ್ಷ ವಿಲೀನ ಮಾಡು ಎಂದು ಮೋದಿ ಅವರು ಹೇಳಿದಾಗ ಮಾಡಿದ್ದೇನೆ. ಅವತ್ತು ಜನಾರ್ದನ ರೆಡ್ಡಿ ಇದ್ದರೇ? ಜನಾರ್ದನ ರೆಡ್ಡಿ ನಮ್ಮ ಆಸ್ತಿ ಎಂದು ಪಕ್ಷದ ವೇದಿಕೆಗಳಲ್ಲಿ ಹೈಕಮಾಂಡ್‌ಗೆ ಹೇಳಿದ್ದೇನೆ. ದಯವಿಟ್ಟು ಅವರನ್ನು ಜೈಲಿನಿಂದ ಬಿಡಿಸಿ ಎಂದು ಕೇಳಿಕೊಂಡಿದ್ದೇನೆ. ಕನಸು ಮನಸಲ್ಲೂ ನಾನು ಅವರಿಗೆ ಕೆಟ್ಟದು ಬಯಸಿರಲಿಲ್ಲ’ ಎಂದು ತಿಳಿಸಿದರು.
‘ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಕರೆದುಕೊಳ್ಳಲು ಕೇಂದ್ರ ನಾಯಕರು ವಿಳಂಬ ಮಾಡಿದಾಗ ನಾನೇ ಹೋಗಿ ಅವರ ಪರವಾಗಿ ಮಾತನಾಡಿದ್ದೆ. ‘ಜನಾರ್ದನ ರೆಡ್ಡಿ ಬಂದ ಮೇಲೆ ನೀನೂ ಸೋತೆ, ಉತ್ತರ ಕರ್ನಾಟಕದಲ್ಲಿ ಎಲ್ಲರೂ ಸೋತರು’ ಎಂದು ಇದೇ ರಾಧಾಮೋಹನ ದಾಸ್ ಹೇಳಿದ್ದರು. ಸೋಲು ಅನಾಥ. ಸೋಲಾದಾಗ ರೆಡ್ಡಿ ತನ್ನ ಮೇಲೆ ಹಾಕಿಕೊಳ್ಳುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಜನಾರ್ದನ ರೆಡ್ಡಿ 25 ವರ್ಷ ಮುಂಚಿತವಾಗಿ ಯೋಚಿಸುತ್ತಾರೆ. ಅದಕ್ಕಾಗಿಯೇ ರಾಮುಲು ಇಲ್ಲಿರಬಾರದು ಎಂಬುದು ಅವರ ಇಚ್ಛೆ. ಬಂಗಾರು ಹನುಮಂತು ಅವರಿಗೆ ಬೆಳೆಯುವ ಆಸೆ ಇದೆ. ಅದರೆ, ವೇಗ ಜಾಸ್ತಿ ಇದೆ. ಅವರು ಅಪಘಾತಕ್ಕೆ ಈಡಾಗಬೇಕಾಗುತ್ತದೆ. ಅಂಥವರೇ ಜನಾರ್ದನ ರೆಡ್ಡಿ ತಲೆ ಕೆಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.