ADVERTISEMENT

‘ಲವ್‌ ಜಿಹಾದ್‌‘ ಹೆಸರಲ್ಲಿ ಕಾನೂನಿಗೆ ವಿರೋಧ

ಜನವಾದಿ ಮಹಿಳಾ ಸಂಘಟನೆಯ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 20:22 IST
Last Updated 14 ಫೆಬ್ರುವರಿ 2021, 20:22 IST

ಬೆಂಗಳೂರು: ‘ಲವ್‌ ಜಿಹಾದ್‌‘ ಎಂಬ ಹೆಸರನ್ನು ಮುಂದಿಟ್ಟುಕೊಂಡು ಉತ್ತರ ಪ್ರದೇಶದ ಮಾದರಿಯಲ್ಲಿ ಕಾನೂನು ತರುವ ಪ್ರಸ್ತಾವವನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕ ಒತ್ತಾಯಿಸಿದೆ.

ಸಂಘಟನೆಯ ನೇತೃತ್ವದಲ್ಲಿ ‘ನನ್ನ ಬದುಕು– ನನ್ನ ಆಯ್ಕೆ’: ಸಂವಿಧಾನದ 21ನೇ ವಿಧಿ ಕುರಿತ ದುಂಡುಮೇಜಿನ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಂಡಿದ್ದು, ‘ಸಂವಿಧಾನದತ್ತವಾಗಿ ಲಭಿಸಿರುವ ಹಾಗೂ ಸುಪ್ರೀಂಕೋರ್ಟ್‌, ಹೈಕೋರ್ಟ್‌ಗಳು ಎತ್ತಿ ಹಿಡಿದಿರುವ ಆಯ್ಕೆ ಸ್ವಾತಂತ್ರ್ಯವನ್ನು ಹತ್ತಿಕ್ಕಬಾರದು’ ಎಂದು ಆಗ್ರಹಿಸಿದೆ.

‘ಮರ್ಯಾದೆ’ಯ ಹೆಸರಿನಲ್ಲಿ ರಾಜ್ಯದಲ್ಲಿ ನಡೆದಿರುವ ಹತ್ಯೆ ಪ್ರಕರಣಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಇಂತಹ ಪ್ರಕರಣಗಳು ನಡೆಯದಂತೆ ಕಠಿಣವಾದ ಕಾನೂನು ರೂಪಿಸಬೇಕು. ಹತ್ಯೆಗಳಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅಂತರ್‌ ಧರ್ಮೀಯ ಮತ್ತು ಅಂತರ್ಜಾತಿಯ ವಿವಾಹ ಆಗಿರುವವರಿಗೆ ರಕ್ಷಣೆ ನೀಡಲು ವಿಶೇಷ ವಿವಾಹ ಕಾಯ್ದೆಯನ್ನು ಬಲಪಡಿಸಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

ADVERTISEMENT

ಅಂತರ್‌ ಧರ್ಮೀಯ ಮತ್ತು ಅಂತರ್ಜಾತಿಯ ವಿವಾಹಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರೀಂಕೋರ್ಟ್‌ ನೀಡಿರುವ ಸೂಚನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪೊಲೀಸರು ಹಾಗೂ ಇತರ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗೆ ಈ ಕುರಿತು ತರಬೇತಿ ನೀಡಬೇಕು. ಸಂವಿಧಾನಬದ್ಧ ಆಯ್ಕೆಯ ಹಕ್ಕುಗಳ ಕುರಿತು ಜಾಗೃತಿ ಮೂಡಿಸಬೇಕು. ಮಹಿಳೆಯರು, ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಘನತೆಯ ಬದುಕನ್ನು ಖಾತ್ರಿಗೊಳಿಸಬೇಕು ಎಂದು ಆಗ್ರಹಿಸುವ ನಿರ್ಣಯಗಳನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ಎಸ್‌. ವಿಮಲಾ ಅಧ್ಯಕ್ಷತೆ ವಹಿಸಿದ್ದರು. ವಕೀಲೆ ಮೈತ್ರೇಯಿ ಕೃಷ್ಣನ್‌ ಅವರು ಸಂವಿಧಾನದ 21ನೇ ವಿಧಿ ಕುರಿತು ಉಪನ್ಯಾಸ ನೀಡಿದರು. ಲೇಖಕರಾದ ಡಾ.ಎಚ್‌. ಜಯಲಕ್ಷ್ಮಿ, ಡಾ.ಎನ್‌. ಗಾಯತ್ರಿ, ವಿಮೆನ್ಸ್‌ ವಾಯ್ಸ್‌ನ ಲೀಲಾವತಿ, ದಲಿತ ಹಕ್ಕುಗಳ ಸಮಿತಿಯ ಕವಿತಾ, ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ, ಸಮುದಾಯ ಸಂಘಟನೆಯ ಸುರೇಂದ್ರ ರಾವ್‌, ಎಸ್‌ಎಫ್‌ಐನ ಭೀಮನಗೌಡ, ‘ಗಮನಾ’ದ ಮಧುಭೂಷಣ, ಮಮತಾ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.