ADVERTISEMENT

ಜಾರಕಿಹೊಳಿ ಸಿಡಿ ಪ್ರಕರಣ: ಪಿಐಎಲ್‌ ವಿಲೇವಾರಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 16:08 IST
Last Updated 10 ಮಾರ್ಚ್ 2022, 16:08 IST

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಭಾಗಿಯಾಗಿದ್ದಾರೆನ್ನಲಾದ ಲೈಂಗಿಕ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಯನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಿಲೇವಾರಿ ಮಾಡಿದೆ.

ಎಸ್‌ಐಟಿ ರಚನೆ ಪ್ರಶ್ನಿಸಿ ಹೈಕೋರ್ಟ್‌ ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಪಿಐಎಲ್ ಮತ್ತು ಸಂತ್ರಸ್ತೆ ಸಲ್ಲಿಸಿದ್ದ ಎರಡು ಪ್ರತ್ಯೇಕ ರಿಟ್‌ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

‘ಸಂತ್ರಸ್ತೆಯೇ ಈಗ ಪ್ರತ್ಯೇಕ ರಿಟ್‌ ಅರ್ಜಿ ಸಲ್ಲಿಸಿರುವುದರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಅಗತ್ಯವಿಲ್ಲ‘ ಎಂಬ ಅಭಿಪ್ರಾಯದೊಂದಿಗೆ ನ್ಯಾಯಪೀಠ, ‘ಸಂತ್ರಸ್ತೆ ಸಲ್ಲಿಸಿರುವ ಎರಡು ಪ್ರತ್ಯೇಕ ರಿಟ್‌ ಅರ್ಜಿಗಳನ್ನು ಸಂಬಂಧಿಸಿದ ಏಕಸದಸ್ಯ ನ್ಯಾಯಪೀಠದ (ರೆಗ್ಯೂಲರ್ ರೋಸ್ಟರ್ ಬೆಂಚ್) ವಿಚಾರಣೆಗೆ ನಿಗದಿಪಡಿಸಲಾಗುವುದು’ ಎಂದು ಆದೇಶಿಸಿದೆ.

ADVERTISEMENT

ಎಸ್‌ಐಟಿ ರಚಿಸಿ ನಗರ ಪೊಲೀಸ್ ಆಯುಕ್ತರು 2021ರ ಮಾರ್ಚ್‌ 11 ರಂದು ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಗೀತಾ ಮಿಶ್ರಾ 2021ರ ಮಾರ್ಚ್‌ 29ರಂದು ಪಿಐಎಲ್ ಸಲ್ಲಿಸಿದ್ದರು. ನಂತರ ಎಸ್‌ಐಟಿ ರಚನೆ ಸಿಂಧುತ್ವ ಪ್ರಶ್ನಿಸಿ ಮತ್ತು ರಮೇಶ ಜಾರಕಿಹೊಳಿ ಸದಾಶಿವನಗರ ಠಾಣೆಗೆ ದಾಖಲಿಸಿದ್ದ ದೂರು ರದ್ದುಪಡಿಸಬೇಕು ಎಂದು ಕೋರಿ ಸಂತ್ರಸ್ತೆಯು 2021ರ ಜೂನ್ ತಿಂಗಳಲ್ಲಿ ಎರಡು ಪ್ರತ್ಯೇಕ ರಿಟ್‌ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.