ADVERTISEMENT

ಪ್ರಪಂಚವೇ ಇಂದು ಸುಡುನಾಡಾಗಿದೆ

ಸಾಮಾಜಿಕ ನ್ಯಾಯ, ಸಮಾನತೆ ಸಮಾವೇಶದಲ್ಲಿ ಚಂಪಾ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 19:21 IST
Last Updated 23 ಫೆಬ್ರುವರಿ 2019, 19:21 IST
ಕೋಡಿಹಳ್ಳಿ ಚಂದ್ರಶೇಖರ್(ಎಡದಿಂದ), ಬಿ.ಟಿ.ಲಲಿತಾ ನಾಯಕ್, ಚಂದ್ರಶೇಖರ ಪಾಟೀಲ, ಎಲ್.ಹನುಮಂತಯ್ಯ, ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆರ್.ಚಂದ್ರಪ್ಪ ಹಾಗೂ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಜಗದೀಶ್ ಕಾರ್ಯಕ್ರಮದಲ್ಲಿದ್ದರು–ಪ್ರಜಾವಾಣಿ ಚಿತ್ರ
ಕೋಡಿಹಳ್ಳಿ ಚಂದ್ರಶೇಖರ್(ಎಡದಿಂದ), ಬಿ.ಟಿ.ಲಲಿತಾ ನಾಯಕ್, ಚಂದ್ರಶೇಖರ ಪಾಟೀಲ, ಎಲ್.ಹನುಮಂತಯ್ಯ, ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆರ್.ಚಂದ್ರಪ್ಪ ಹಾಗೂ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಜಗದೀಶ್ ಕಾರ್ಯಕ್ರಮದಲ್ಲಿದ್ದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಇಡೀ ಪ್ರಪಂಚವೇ ಇಂದು ಸುಡುನಾಡು ಆಗಿದೆ’ ಎಂದು ಸಾಹಿತಿ ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.

‘ಸುಡುಗಾಡಿನ ಬೆಂಕಿಯಲ್ಲಿ ಶವ ಬೇಯುತ್ತದೆ. ಸುಡುನಾಡಿನಲ್ಲಿ ಮನುಷ್ಯ ಅಸಮಾನತೆ, ಜಾತೀಯತೆ, ವರದಕ್ಷಿಣೆ, ದನದ ಮಾಂಸ, ಅಂತರ್ಜಾತಿ ವಿವಾಹ ಸೇರಿದಂತೆ ನೂರೆಂಟು ಕಾರಣಕ್ಕಾಗಿ ಮತ್ತೊಬ್ಬರನ್ನು ಸುಡುತ್ತಿದ್ದಾನೆ’ ಎಂದು ಆತಂಕ ವ್ಯಕ್ತಪಡಿಸಿದರು.

ಜಯ ಕರ್ನಾಟಕ ಸಂಘಟನೆಯು ಕಲ್ಪಳ್ಳಿ ಸ್ಮಶಾನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸಾಮಾಜಿಕ ನ್ಯಾಯ ಮತ್ತು ಸಮಾನತೆ ಸಮಾವೇಶ’ದಲ್ಲಿ ಅವರು ಮಾತನಾಡಿದರು.

ADVERTISEMENT

‘ಕ್ರಾಂತಿಯಿಂದಾಗಿ ಜಾತಿ ಮತ್ತು ಧಾರ್ಮಿಕ ತಾರತಮ್ಯ ಹೋಗುತ್ತದೆ ಎಂಬ ಗ್ಯಾರಂಟಿ ನನಗಿಲ್ಲ. ನೀವು ನೂರೆಂಟು ದೇವರುಗಳನ್ನು ಮನೆಯಲ್ಲಿ ಪೂಜೆ ಮಾಡಿ, ಬೀದಿಗೆ ಬರುವಾಗ ಅವರನ್ನು ಬೆನ್ನಿಗೆ ಕಟ್ಟಿಕೊಂಡು ಬರಬೇಡಿ. ಸಂವಿಧಾನದ ವಿಚಾರಧಾರೆ ತುಂಬಿಕೊಂಡು ಮನೆಯಿಂದ ಹೊರಬನ್ನಿ. ಆಗ ಮಾತ್ರ ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವ ಭಾವಗಳು ಸಮಾಜದಲ್ಲಿ ನೆಲೆಗೊಳ್ಳುತ್ತದೆ’ ಎಂದು ಕಿವಿಮಾತು ಹೇಳಿದರು.

ಲೇಖಕಿ ಬಿ.ಟಿ.ಲಲಿತಾ ನಾಯಕ್‌, ‘ಒಬ್ಬ ಸೈನಿಕನ ಸಾವಿನ ಬದಲಿಗೆ ಎದುರಾಳಿಯ ಮತ್ತೊಬ್ಬ ಸೈನಿಕನ ಜೀವಬಲಿ ಪಡೆಯಬೇಕು ಎಂಬುದು ಯಾವ ನ್ಯಾಯ? ಇಂತಹ ಹೇಳಿಕೆ ನೀಡುವ ಯಾವ ಸಂಸದ, ಶಾಸಕ ಅಥವಾ ಸಂಘಟನೆ ನಾಯಕರು ಗಡಿ ಕಾಯಲು ಸಿದ್ಧರಿದ್ದಾರೆ? ಸೈನಿಕರು ಬದುಕಿದ್ದಾಗ ಅವರ ಕಷ್ಟ–ಸುಖ ವಿಚಾರಿಸದವರು, ಹುತಾತ್ಮರಾದ ಬಳಿಕ ಮನೆಗಳಿಗೆ ಹೋಗಿ ಪೋಸು ಕೊಡುತ್ತಾರೆ. ಇಂತಹ ಬೂಟಾಟಿಕೆ ಬಿಡಬೇಕು’ ಎಂದರು.

ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ, ‘ಅಸಮಾನತೆ ತಲೆಮಾರುಗಳಿಗೆ ವರ್ಗವಾದಂತೆ ಮೌಲ್ಯಗಳು ಕುಸಿಯುತ್ತವೆ. ಸಾಮಾಜಿಕ ಸಮಾನತೆಯೊಂದಿಗೆ ಆರ್ಥಿಕ, ರಾಜಕೀಯ ಸಮಾನತೆಯೂ ಇಂದು ಜನರಿಗೆ ಬೇಕಿದೆ’ ಎಂದರು.

‘ಮಹಾನಗರ ಪಾಲಿಕೆ ಸದಸ್ಯನಾಗಲು ₹ 3 ಕೋಟಿ, ಶಾಸಕನಾಗಲು ₹ 10 ಕೋಟಿ ಖರ್ಚು ಮಾಡಬೇಕಾದ ಸ್ಥಿತಿ ಈಗಿದೆ. ನಾವು ಪ್ರಾಮಾಣಿಕ ಮುಖಂಡರನ್ನು ಆಯ್ಕೆ ಮಾಡದೆ, ಧರ್ಮಗಳ ಮಧ್ಯೆ ದ್ವೇಷ ಬಿತ್ತುವವರನ್ನೇ ಚುನಾಯಿಸಿದರೆ, ಸಾಮಾಜಿಕ ನ್ಯಾಯ ಗಗನಕುಸುಮ ಆಗಲಿದೆ’ ಎಂದು ಅವರು ಹೇಳಿದರು.

**

ಕಾಶ್ಮೀರದಲ್ಲಿನ ಸಂಘರ್ಷಕ್ಕೆ ಇಡೀ ದೇಶವೇ ಮರುಗಿತು. ದೇಶದಲ್ಲಿ ಪ್ರತಿ ಗಂಟೆಗೆ 4 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರತ್ತ ಯಾರೂ ನೋಡುತ್ತಿಲ್ಲ. ಇದು ಕೂಡ ಅಸಮಾನತೆಯೆ.
-ಕೋಡಿಹಳ್ಳಿ ಚಂದ್ರಶೇಖರ್‌, ಅಧ್ಯಕ್ಷ, ರೈತ ಸಂಘ ಹಾಗೂ ಹಸಿರು ಸೇನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.