ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನೂತನ ನಿರ್ದೇಶಕರ ಹುದ್ದೆಗೆ ಡಾ. ದಿನೇಶ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಆ ಕುರಿತು ಹೈಕೋರ್ಟ್‌ಗೆ ವರದಿ ಸಲ್ಲಿಸಿ ನಂತರ ಆದೇಶ ಹೊರಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಆಡಳಿತ ಮಂಡಳಿ ಸಭೆ ನಿರ್ಧರಿಸಿದೆ.
ಆಡಳಿತ ಮಂಡಳಿ ಸಭೆಯು ವಿಧಾನಸೌಧದಲ್ಲಿ ಗುರುವಾರ ನಡೆಯಿತು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ ಕೂಡಾ ಇದ್ದರು. ಸಭೆಯಲ್ಲಿ ನಿರ್ದೇಶಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದ 11 ಹಿರಿಯ ವೈದ್ಯರ ಪೈಕಿ 10 ಮಂದಿಯ ಸಂದರ್ಶನ ನಡೆಸಲಾಗಿದೆ.
ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ಅವರ ಅವಧಿ ಮುಕ್ತಾಯವಾಗುತ್ತಿರುವ ಕಾರಣ ಹೊಸ ನಿರ್ದೇಶಕರ ನೇಮಕ ಮಾಡಬೇಕಿದೆ.
ಡಾ. ದಿನೇಶ್, ಡಾ. ಎಂ. ದಿವ್ಯಾ ಪ್ರಕಾಶ್, ಡಾ.ಬಿ. ಗಿರೀಶ್, ಡಾ.ಎಸ್. ಜಯಪ್ರಕಾಶ್, ಡಾ.ವಿ. ಕುಮಾರಸ್ವಾಮಿ, ಡಾ.ಎ.ಸಿ. ನಾಗಮಣಿ, ಡಾ.ಸಿ.ಜಿ. ಪ್ರಭುಶಂಕರ್, ಡಾ.ಎಂ. ಪ್ರಸನ್ನ ಸಿಂಹ ಮತ್ತು ಡಾ. ವೇಣುಗೋಪಾಲ್ ರಾಮ್‌ರಾವ್ ಸಂದರ್ಶನದಲ್ಲಿ ಭಾಗವಹಿಸಿದ್ದರು. ಡಾ. ಸತೀಶ್ ಗೋವಿಂದಯ್ಯ ಗೈರಾಗಿದ್ದರು.
‘ನಿರ್ದೇಶಕ ಹುದ್ದೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇರುವುದರಿಂದ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಮಂಡಳಿ ಸಭೆಯ ನಿರ್ಣಯವನ್ನು ಹೈಕೋರ್ಟ್‌ಗೆ ಸರ್ಕಾರ ಸಲ್ಲಿಸಲಿದೆ. ಹೈಕೋರ್ಟ್ ನೀಡುವ ಆದೇಶದಂತೆ ಹೆಸರು ಘೋಷಣೆ ಆಗಲಿದೆ’ ಎಂದೂ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.