ADVERTISEMENT

ಜಯಲಲಿತಾ ಚಿನ್ನಾಭರಣ ವಾಪಸು ಕೋರಿದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 15:24 IST
Last Updated 13 ಜನವರಿ 2025, 15:24 IST
<div class="paragraphs"><p>ಹೈಕೋರ್ಟ್‌&nbsp;</p></div>

ಹೈಕೋರ್ಟ್‌ 

   

ಬೆಂಗಳೂರು: ‘ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ವಶಕ್ಕೆ ಪಡೆಯಲಾಗಿದ್ದ ಬಹುಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಇತರೆ ವಸ್ತುಗಳನ್ನು ಕಾನೂನುಬದ್ಧ ವಾರಸುದಾರರಾದ ನಮಗೇ ಮರಳಿಸುವಂತೆ ನಿರ್ದೇಶಿಸಬೇಕು’ ಎಂದು ಕೋರಿ ಅವರ ಪರ ವಾರಸುದಾರರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಈ ಸಂಬಂಧ ದಿವಂಗತ ಜಯಲಲಿತಾ ಅವರ ಸಹೋದರ ಜಯಕುಮಾರ್‌ ಮಕ್ಕಳಾದ ಜೆ.ದೀಪಕ್‌ ಮತ್ತು ಜೆ.ದೀಪಾ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಗಳನ್ನು ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿ ಆದೇಶಿಸಿದೆ.

ADVERTISEMENT

‘ಆಸ್ತಿ ಮತ್ತು ಚಿನ್ನಾಭರಣ ಮುಟ್ಟುಗೋಲು ಹಾಕಿಕೊಂಡಿರುವುದನ್ನು ಸುಪ್ರೀಂ ಕೋರ್ಟ್‌ ಈಗಾಗಲೇ ಪುಷ್ಟೀಕರಿಸಿದ್ದು, ಅರ್ಜಿದಾರರು ಕೇಳಿರುವ ಲಗತ್ತಿನ ಪ್ರಶ್ನೆ ಈಗ ಉದ್ಭವಿಸುವುದಿಲ್ಲ. ಅರ್ಜಿದಾರರು ಜಯಲಲಿತಾ ವಾರಸುದಾರರೇ ಇರಬಹುದು. ಆದರೆ, ಈ ಹಿಂದೆ ಎಂದೂ ಅವರು ನ್ಯಾಯಾಲಯದ ಮುಂದೆ ಬಂದಿಲ್ಲ. ವಶಪಡಿಸಿಕೊಳ್ಳದೇ ಇರುವ ವಸ್ತುಗಳನ್ನು ಮರಳಿಸುವಂತೆ ಕೋರಿದ್ದಾರೆ. ಆದರೆ, ಅವುಗಳಿಗೆ ಯಾವುದೇ ಆಧಾರವಿಲ್ಲ. ಹೀಗಾಗಿ, ಈ ಅರ್ಜಿಗಳನ್ನು ಪರಿಗಣಿಸಲಾಗದು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಕೋರಿಕೆ ಏನಿತ್ತು?: ‘ಜಯಲಲಿತಾ ಅವರಿಗೆ ಸೇರಿದ ಚಿನ್ನಾಭರಣ ಮತ್ತು ಇತರ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವಂತೆ ನಗರದ 36ನೇ ಹೆಚ್ಚುವರಿ ಸಿಸಿಎಚ್‌ ಕೋರ್ಟನ್‌ ವಿಶೇಷ ನ್ಯಾಯಾಲಯ 2023ರ ಜುಲೈ 12ರಂದು ಆದೇಶಿಸಿದೆ. ಈ ಆದೇಶವನ್ನು ರದ್ದುಗೊಳಿಸಿ ಜಯಲಲಿತಾರ ಕಾನೂನುಬದ್ಧ ವಾರಸುದಾರರಾಗಿರುವ ನಮಗೇ ಎಲ್ಲ ಚಿನ್ನಾಭರಣಗಳನ್ನು ಹಸ್ತಾಂತರಿಸಲು ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

ಚೆನ್ನೈನ ಎಸಿಬಿ ಪರ ವಿಶೇಷ ಪ್ರಾಸಿಕ್ಯೂಟರ್‌ ಆಗಿ ಪದಾಂಕಿತ ಹಿರಿಯ ವಕೀಲ ಕಿರಣ್‌ ಜವಳಿ ಮತ್ತು ತಮಿಳುನಾಡು ರಾಜ್ಯ ಸರ್ಕಾರದ ಪರವಾಗಿ ಪದಾಂಕಿತ ಹಿರಿಯ ವಕೀಲ ಸಂದೇಶ್‌ ಜೆ.ಚೌಟ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.