ADVERTISEMENT

ಯಾರಿಗೆ ಒಲಿಯಲಿದೆ ಜೆಡಿಎಸ್ ಸಾರಥ್ಯ?

ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ: ದೇವೇಗೌಡರ ತೀರ್ಮಾನದ ಬಗ್ಗೆ ಕುತೂಹಲ

ಡಿ.ಎಂ.ಕುರ್ಕೆ ಪ್ರಶಾಂತ
Published 11 ಜೂನ್ 2019, 19:45 IST
Last Updated 11 ಜೂನ್ 2019, 19:45 IST
ಸಿ.ಬಿ.ಸುರೇಶ್‌ಬಾಬು
ಸಿ.ಬಿ.ಸುರೇಶ್‌ಬಾಬು   

ತುಮಕೂರು: ತುಮಕೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷರ ಬದಲಾವಣೆಗೆ ವರಿಷ್ಠರು ಮುಂದಾಗುತ್ತಿದ್ದಂತೆಯೇ ಆ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರಲ್ಲಿ ಕುತೂಹಲ ಮೂಡಿದೆ.

ಸೋಮವಾರ ಸಂಜೆ 6ರಿಂದ 8ರವರೆಗೆ ಬೆಂಗಳೂರಿನಲ್ಲಿ ಪಕ್ಷದ ಜಿಲ್ಲಾ ಪ್ರಮುಖರು, ಜಿಲ್ಲೆಯ ಶಾಸಕರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾದ ಅಭ್ಯರ್ಥಿಗಳು, ಎಂಎಲ್‌ಸಿ ಕಾಂತರಾಜು, ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರ ಜೊತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸಭೆ ನಡೆಸಿದರು.

ದೇವಸ್ಥಾನಕ್ಕೆ ತೆರಳಿದ್ದ ಕಾರಣಕ್ಕೆ ಕೊರಟಗೆರೆಯ ಮಾಜಿ ಶಾಸಕ ಸುಧಾಕರ್ ಲಾಲ್ ಮತ್ತು ಅನಾರೋಗ್ಯದ ಕಾರಣಕ್ಕೆ ಕುಣಿಗಲ್ ಮಾಜಿ ಶಾಸಕ ಡಿ.ನಾಗರಾಜಯ್ಯ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.

ADVERTISEMENT

ಈ ಸಭೆಯ ಮಾಹಿತಿ ಹೊರ ಬೀಳುತ್ತಲೇ ಜಿಲ್ಲೆಯ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಜಿಲ್ಲಾ ಜೆಡಿಎಸ್ ಸಾರಥ್ಯವನ್ನು ಯಾರು ವಹಿಸಿಕೊಳ್ಳುವರು ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಸಮುದಾಯ, ಹಿರಿತನ, ಸಂಘಟನಾ ಸಾಮರ್ಥ್ಯ, ಪ್ರಭಾವ...ಹೀಗೆ ತಮ್ಮದೇ ಆದ ಲೆಕ್ಕಾಚಾರದಲ್ಲಿ ಮುಖಂಡರು ತೊಡಗಿದ್ದಾರೆ.

ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು, ಪಾವಗಡ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಮಾಜಿ ಶಾಸಕ ಎಚ್.ನಿಂಗಪ್ಪ, ತಿಪಟೂರಿನ ಲೋಕೇಶ್ವರ್, ಕೊರಟಗೆರೆಯ ಯಾದವ ಸಮಾಜದ ಮುಖಂಡ ಮಹಾಲಿಂಗಪ್ಪ ಜಿಲ್ಲಾ ಜೆಡಿಎಸ್ ಸಾರಥ್ಯವಹಿಸಿಕೊಳ್ಳುವವರ ಪಟ್ಟಿಯಲ್ಲಿ ಪ್ರಮುಖವಾಗಿ ಇದ್ದಾರೆ ಎನ್ನುತ್ತವೆ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರ ಆಪ್ತ ಮೂಲಗಳು. ಇದೆಲ್ಲವನ್ನೂ ಮೀರಿ ದೇವೇಗೌಡರು ಬೇರೊಂದು ಲೆಕ್ಕಾಚಾರ ಮಾಡಿದರೆ ಅಧ್ಯಕ್ಷ ಸ್ಥಾನ ಮತ್ತೊಬ್ಬರಿಗೂ ಒಲಿಯಬಹುದು.

ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಜಿಲ್ಲೆಗೆ ಬಂದಿಲ್ಲ. ಸಚಿವ ಸಂಪುಟ ವಿಸ್ತರಣೆ ವಿಚಾರ ಹಾಗೂ ದೇವೇಗೌಡರ ಕುಟುಂಬದಲ್ಲಿ ಜೂ.14ರಂದು ವಿವಾಹ ಕಾರ್ಯಕ್ರಮವಿದೆ. ಈ ಎಲ್ಲ ಕಾರ್ಯಗಳು ಮುಗಿದ ನಂತರ ಜಿಲ್ಲೆಗೆ ಭೇಟಿ ನೀಡುವರು. ಅಧ್ಯಕ್ಷರನ್ನು ಘೋಷಿಸಿ ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮತದಾರರಿಗೆ ಕೃತಜ್ಞತೆ ಸಲ್ಲಿಸುವರು. ನಂತರ ಉಳಿದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶ ನಡೆಸುವರು ಎನ್ನಲಾಗಿದೆ.

ಜಿಲ್ಲಾ ಘಟಕದ ಅಧ್ಯಕ್ಷ ಸಿ.ಚನ್ನಿಗಪ್ಪ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆ ಕಾರಣಕ್ಕೆ ಅಧ್ಯಕ್ಷರನ್ನು ಬದಲಾವಣೆಗೆ ವರಿಷ್ಠರು ಮುಂದಾಗಿದ್ದಾರೆ. ಸಂಸದ ಭಾಸ್ಕರಪ್ಪ ಎರಡು ವರ್ಷ ಅಧ್ಯಕ್ಷರಾಗಿದ್ದರು. ಲಕ್ಷ್ಮಿನರಸಿಂಹಯ್ಯ ಅವರು ಅಧ್ಯಕ್ಷರಾಗಿದ್ದ ಕಾಲದಲ್ಲಿ ಅವರ ಎದುರು ಮಾತನಾಡಲು ಎಲ್ಲರೂ ಹಿಂಜರಿಯುತ್ತಿದ್ದರು. ಅವರು ಹೇಳಿದ್ದೇ ಮಾತು ಎನ್ನುವಂತೆ ಇತ್ತು. ಹಿಂದುಳಿದ ವರ್ಗಗಳ ಮುಖಂಡರಿಗೆ ಸ್ಥಾನ ನೀಡಿದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎನ್ನುವರು ಜಿಲ್ಲಾ ಮುಖಂಡರೊಬ್ಬರು.

***

ಎಲ್ಲ ಘಟಕಗಳಿಗೆ ಪುನಶ್ಚೇತನ

ಜಿಲ್ಲೆಯಲ್ಲಿ ಜೆಡಿಎಸ್‌ಗೆ ಉತ್ತಮವಾದ ನೆಲೆ ಇದೆ. ಈ ಕಾರಣದಿಂದಲೇ ಎಚ್.ಡಿ.ದೇವೇಗೌಡರು ಇಲ್ಲಿ ಸ್ಪರ್ಧಿಸಿದ್ದರು. ಅವರ ಸೋಲು ಪಕ್ಷದ ವಿವಿಧ ಘಟಕಗಳ ನಿಷ್ಕ್ರಿಯತೆಗೂ ಸಾಕ್ಷಿ ಎನ್ನುವಂತಿದೆ. ಆದ ಕಾರಣಕ್ಕೆ ಜಿಲ್ಲೆಯ ಪಕ್ಷದ ಎಲ್ಲ ಘಟಕಗಳನ್ನು ಪುನರ್ ರಚನೆ ಮಾಡಲಾಗುತ್ತದೆ ಎನ್ನುತ್ತವೆ ಉನ್ನತ ಮೂಲಗಳು. ಈ ಪುನರ್ ರಚನೆ ಪಕ್ಷಕ್ಕೆ ಬಲ ಮತ್ತು ಚೈತನ್ಯ ನೀಡಲಿದೆ ಎನ್ನುವ ಆಶಾವಾದ ಮುಖಂಡರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.