ADVERTISEMENT

‘ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಕೊಡಲ್ಲ’ ಸಾಯಿಬಾಬಾ ಮುಂದೆ ಅತೃಪ್ತ ಶಾಸಕರ ಪ್ರಮಾಣ

ಗಣಪತಿ ದೇವಸ್ಥಾನದಲ್ಲಿ ರೇವಣ್ಣ ಪೂಜೆ; ಅತೃಪ್ತರ ಶಿರಡಿ ಯಾನ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 19:52 IST
Last Updated 13 ಜುಲೈ 2019, 19:52 IST
ಶಿರಡಿ ಸಾಯಿಬಾಬಾ ಮಂದಿರಕ್ಕೆ ಶನಿವಾರ ಭೇಟಿ ನೀಡಿದ ಅತೃಪ್ತ ಶಾಸಕರು ಪ್ರಾರ್ಥನೆ ಸಲ್ಲಿಸಿದರು. – ಪಿಟಿಐ ಚಿತ್ರ
ಶಿರಡಿ ಸಾಯಿಬಾಬಾ ಮಂದಿರಕ್ಕೆ ಶನಿವಾರ ಭೇಟಿ ನೀಡಿದ ಅತೃಪ್ತ ಶಾಸಕರು ಪ್ರಾರ್ಥನೆ ಸಲ್ಲಿಸಿದರು. – ಪಿಟಿಐ ಚಿತ್ರ   

ಬೆಂಗಳೂರು: ರಾಜ್ಯದ ಸಮ್ಮಿಶ್ರಸರ್ಕಾರವನ್ನು ಹೇಗಾದರೂ ಮಾಡಿ ಉರುಳಿಸಬೇಕು ಎಂಬ ತೀರ್ಮಾನದಿಂದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಯಲ್ಲಿ ಬೀಡು ಬಿಟ್ಟಿರುವ 12 ಮಂದಿ ಅತೃಪ್ತ ಶಾಸಕರು ಶನಿವಾರ ಶಿರಡಿಗೆ ತೆರಳಿ ಸಾಯಿಬಾಬಾ ಪದತಲದಲ್ಲಿ ‘ಯಾವುದೇ ಕಾರಣಕ್ಕೂ ನಾವು ರಾಜೀನಾಮೆ ಹಿಂಪಡೆಯುವುದಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡುವುದಿಲ್ಲ’ ಎಂಬ ಪ್ರಮಾಣ ಮಾಡಿದರು.

ಇತ್ತ ಜಯನಗರದ ಗಣಪತಿ ದೇವಸ್ಥಾನದಲ್ಲಿ ಸರ್ಕಾರದ ಉಳಿವಿಗೆ ಪ್ರಾರ್ಥಿಸಿ ಜೆಡಿಎಸ್ ವತಿಯಿಂದ ಮೃತ್ಯುಂಜಯ ಹೋಮ ಮಾಡಿಸಲಾಯಿತು. ಎಚ್‌.ಡಿ.ರೇವಣ್ಣ ಅವರ ಮಾರ್ಗದರ್ಶನದಲ್ಲಿ ಈ ಹೋಮ ನಡೆಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಂಬೈನಿಂದ ಎಲ್ಲ 12 ಮಂದಿ ಶಾಸಕರು ವಿಶೇಷ ವಿಮಾನದಲ್ಲಿ ಶಿರಡಿಗೆ ತೆರಳಿದರು. ಸಾಯಿಬಾಬಾ ಪ್ರತಿಮೆ ಮುಂದೆಎಲ್ಲರೂ ಒಟ್ಟಾಗಿ ನಿಂತು ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ADVERTISEMENT

ಅತೃಪ್ತರಲ್ಲಿ ಕನಿಷ್ಠ ನಾಲ್ಕು ಮಂದಿಯನ್ನಾದರೂ ವಾಪಸ್‌ ಕರೆಸುವ ಉತ್ಸಾಹದಲ್ಲಿರುವ ದೋಸ್ತಿಗಳಿಗೆ ಈ ಪ್ರತಿಜ್ಞೆ ಆಘಾತದಂತೆ ಕೇಳಿಸಿದ್ದರೂ, ಅವರನ್ನು ಮನವೊಲಿಸುವ ಪ್ರಯತ್ನ ಮುಂದುವರಿದಿದೆ.

ಸರ್ಕಾರ ಸುಭದ್ರವಾಗಿರಲು ಎಂಟು ಅರ್ಚಕರಿಂದ ಮೃತ್ಯುಂಜಯ ಹೋಮ, ಗಣ ಹೋಮ ಮಾಡಿಸಿದ್ದಾರೆ. ಕಳೆದ ಐದು ದಿನಗಳಿಂದ ಬರಿಗಾಲಿನಲ್ಲಿ ಓಡಾಡುತ್ತಿದ್ದ ರೇವಣ್ಣ, ಮೊನ್ನೆ ತಿರುಪತಿಗೆ ಹೋಗಿ ವಿಶೇಷ ಪೂಜೆ ಮಾಡಿಸಿಯೂ ಬಂದಿದ್ದರು.

ಇನ್ನು ಇಲ್ಲೇ ಆಪರೇಷನ್‌
ಬೆಂಗಳೂರು: ಇನ್ನು ಮುಂಬೈಯಲ್ಲಿ ಅಲ್ಲ, ಇಲ್ಲೇ ಆಪರೇಷನ್‌ ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳುವ ಮೂಲಕ ಹಲವು ಊಹಾಪೋಹಗಳು ಉದ್ಭವವಾಗುವಂತೆ ಮಾಡಿದರು.

‘ಇಲ್ಲೂ ಆಪರೇಷನ್‌ ನಡೆಯುತ್ತಲೇ ಇದೆ. ಇವತ್ತಿನ ಸ್ಥಿತಿಯಲ್ಲಿ ವಿಶ್ವಾಸ ಮತ ಗೆಲ್ಲುತ್ತೇವೆ’ ಎಂದು ಶನಿವಾರ ಅವರು ಪತ್ರಕರ್ತರಿಗೆ ತಿಳಿಸಿದರು. ಈ ಮೂಲಕ ಬಿಜೆಪಿ ಪಾಳಯದ ಕೆಲವರನ್ನು ಸೆಳೆಯಲುಪ್ರತಿ ಆಪರೇಷನ್ ನಡೆಯುವ ಸುಳಿವು ನೀಡಿದರು.

ಮೈತ್ರಿ ಸರ್ಕಾರ ಸುಭದ್ರ: ಬಂಡೆಪ್ಪ
ದೇವನಹಳ್ಳಿ: ಮೈತ್ರಿ ಸರ್ಕಾರ ಸದ್ಯ ಸುಭದ್ರವಾಗಿದೆ ಎಂದು ಸಚಿವ ಬಂಡೆಪ್ಪ ಕಾಶೆಂಪೂರ್‌ ಹೇಳಿದರು.

ಇಲ್ಲಿನ ಕೋಡಗುರ್ಕಿ ಬಳಿ ಇರುವ ಪ್ರೆಸ್ಟೀಜ್‌ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

‘ಅಧಿವೇಶನಕ್ಕೆ ಮೊದಲೆ ವಿಪ್ ಜಾರಿ ಮಾಡಿರುವುದರಿಂದ ಮತ್ತೊಮ್ಮೆ ವಿಪ್ ಜಾರಿ ಮಾಡುವ ಸಾಧ್ಯತೆ ಕಡಿಮೆ. ಆದರೂ ಬುಧವಾರ ನಡೆಯುವ ವಿಶ್ವಾಸ ಮತಯಾಚನೆಗೆ ಮೊದಲು ಬಹುಮತ ಸಾಬೀತಿಗಾಗಿ ವಿಪ್ ಜಾರಿ ಮಾಡುತ್ತಾರೋ ಇಲ್ಲವೋ ಎಂಬುದು ಮುಖ್ಯಮಂತ್ರಿ ಕುಮಾರಸ್ವಾಮಿ ವಿವೇಚನೆಗೆ ಬಿಟ್ಟದ್ದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.