
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಮುಂದಾಗಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ರಚಿಸಿದ್ದಾರೆ.
ಯುವ ಜನತಾದಳದ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪಕ್ಷದ ಪ್ರಮುಖರ ಸಮಿತಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಜವರಾಯಿಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಎ.ತಿಪ್ಪೆಸ್ವಾಮಿ ಅವರು ಸದಸ್ಯರಾಗಿ, ಪಕ್ಷದ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ ಗೌಡ ಸಂಚಾಲಕರನ್ನಾಗಿ ನೇಮಿಸಿದ್ದಾರೆ.
ಜಿಪಿಎ ವ್ಯಾಪ್ತಿಯ ಪಾಲಿಕೆಗಳಿಗೆ ನಡೆಯುವ ಚುನಾವಣೆಗೆ ಅಗತ್ಯ ಕಾರ್ಯತಂತ್ರಗಳನ್ನು ರೂಪಿಸುವುದು, ಪಕ್ಷದ ಸಂಘಟನೆ, ಬಲವರ್ಧನೆಗೆ ಪೂರಕವಾಗಿ ಸರಣಿ ಸಭೆಗಳನ್ನು ಆಯೋಜಿಸುವುದು, ಗೆಲ್ಲುವ ಸಾಮರ್ಥ್ಯ ಇರುವ ಅಭ್ಯರ್ಥಿಗಳನ್ನು ಗುರುತಿಸುವುದು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸದೃಢಗೊಳಿಸುವ ಕೆಲಸಗಳನ್ನು ಸಮಿತಿ ಮಾಡಬೇಕು ಎಂದು ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ವಿಭಾಗಗಳ ಜೆಡಿಎಸ್ ಅಧ್ಯಕ್ಷರನ್ನು ಸಭೆಗಳಿಗೆ ಆಹ್ವಾನಿಸಬೇಕು. ಕಾಲ, ಕಾಲಕ್ಕೆ ಉನ್ನತಮಟ್ಟದ ಸಮಿತಿ ನಡೆಸುವ ಸಭೆಗಳ ಮಾಹಿತಿಯನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತರಬೇಕು ಎಂದು ದೇವೇಗೌಡ ಅವರು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.