ADVERTISEMENT

ದೇಶಪ್ರೇಮ ಗುತ್ತಿಗೆ ಪಡೆದವರಿಂದಲೇ ವಿಭಜನೆ: ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 19:45 IST
Last Updated 15 ಆಗಸ್ಟ್ 2022, 19:45 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ‘ನಿಮ್ಮ (ಬಿಜೆಪಿ– ಸಂಘಪರಿವಾರ) ಸಂಕುಚಿತ ಮನೋಭಾವವೇ ದೇಶ ವಿಭಜನೆ ಆಗಲು ಕಾರಣ. ಈಗ ನೆಹರೂ ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜೆಡಿಎಸ್‌ ರಾಜ್ಯ ಕಚೇರಿಯಲ್ಲಿ ಧ್ವಜಾರೋಹಣದ ಬಳಿಕ ಮಾತನಾಡಿದ ಅವರು, ‘ಇಂದು ದೇಶಪ್ರೇಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿರುವ ಶಕ್ತಿಗಳು ಮತ್ತು ಗಾಂಧೀಜಿಯವರನ್ನು ಕೊಂದವರೇ ದೇಶ ವಿಭಜನೆಗೆ ಕಾರಣರು’ ಎಂದು ಹರಿಹಾಯ್ದರು.

‘ಒಂದು ಕಡೆ ನೆಹರೂ ಅವರ ಭಾವಚಿತ್ರ ಕಣ್ಮರೆ ಮಾಡುತ್ತಾರೆ. ಮತ್ತೊಂದು ಕಡೆ ನೆಹರೂ ರಾಷ್ಟ್ರ ವಿಭಜನೆಗೆ ಕಾರಣ ಎಂದು ನೆಪ ಹೇಳುತ್ತಾರೆ. ನೆಹರೂ ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಹೇಗೆ ಭಾಗವಹಿಸಿತ್ತು. ಅವರ ಕೊಡುಗೆ ಏನೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ’ ಎಂದು ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಕಾಂಗ್ರೆಸ್‌ ಪಕ್ಷವನ್ನೂ ತರಾಟೆ ತೆಗೆದುಕೊಂಡ ಕುಮಾರಸ್ವಾಮಿ, ‘ಅಂದು ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಕಾಂಗ್ರೆಸ್‌ ಬೇರೆ. ಆದರೆ, ಇಂದು ಕಾಂಗ್ರೆಸ್‌ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವವರು ನಕಲಿ ಕಾಂಗ್ರೆಸ್ಸಿಗರು’ ಎಂದರು.

ಧ್ವಜಾರೋಹಣ ನೆರವೇರಿಸಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, 1995ರಲ್ಲಿ ಜನತಾದಳ ಕಚೇರಿಯಲ್ಲಿ ಧ್ವಜಾರೋಹಣಮಾಡಿದೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಎಚ್‌.ಡಿ.ದೇವೇಗೌಡರು ಧ್ವಜಾರೋಹಣ ಮಾಡಿದ್ದರು. ಮುಂದಿನ ಬಾರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಧ್ವಜಾರೋಹಣ ಮಾಡುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.