ADVERTISEMENT

ಜೈಲಿನಿಂದ ರೇವಣ್ಣ ಬಿಡುಗಡೆ, ಕುಟುಂಬಸ್ಥರಿಂದ ಆರತಿ ಬೆಳಗಿ ಸ್ವಾಗತ

ಅಭಿಮಾನಿಗಳ ಎದುರು ಕಣ್ಣೀರು ಹಾಕಿದ ರೇವಣ್ಣ

​ಪ್ರಜಾವಾಣಿ ವಾರ್ತೆ
Published 14 ಮೇ 2024, 9:23 IST
Last Updated 14 ಮೇ 2024, 9:23 IST
ಎಚ್.ಡಿ. ರೇವಣ್ಣ
ಎಚ್.ಡಿ. ರೇವಣ್ಣ   

ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಮಂಗಳವಾರ ಬಿಡುಗಡೆಗೊಂಡಿದ್ದು, ಅವರು ಪದ್ಮನಾಭನಗರದ ಎಚ್‌.ಡಿ.ದೇವೇಗೌಡರ ನಿವಾಸಕ್ಕೆ ತೆರಳಿದಾಗ ಕುಟುಂಬಸ್ಥರು ಆರತಿ ಬೆಳಗಿ ಸ್ವಾಗತಿಸಿದರು.

ದೇವೇಗೌಡರ ನಿವಾಸದ ಬಳಿ ಅಪಾರ ಅಭಿಮಾನಿಗಳು ಜಮಾಯಿಸಿದ್ದರು. ರೇವಣ್ಣ ಅವರು ಕಾರಿನಿಂದ ಇಳಿಯುತ್ತಿದ್ದಂತೆಯೇ ಘೋಷಣೆ ಕೂಗಿ ಸಂಭ್ರಮಿಸಿದರು. ಇದೇ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.  

ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ₹ 5 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಇಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ, ಪಾಸ್‌ಪೋರ್ಟ್‌ ಅನ್ನು ನ್ಯಾಯಾಲಯಕ್ಕೆ ಒಪ್ಪಿಸುವುದು ಸೇರಿದಂತೆ ವಿವಿಧ ಷರತ್ತುಗಳನ್ನು ಪೂರ್ಣಗೊಳಿಸಿದ ಬಳಿಕ ಮಧ್ಯಾಹ್ನದ ವೇಳೆಗೆ ಕಾರಾಗೃಹದಿಂದ ಬಿಡುಗಡೆಯಾದರು.

ADVERTISEMENT

ಕಾರಾಗೃಹದ ಎದುರೂ ಅಭಿಮಾನಿಗಳು ಜಮಾಯಿಸಿದ್ದರು. ಜೈಲಿನಿಂದ ಹೊರ ಬರುತ್ತಿದ್ದಂತೆಯೇ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಂಭ್ರಮಿಸಿದರು. ಇದೇ ವೇಳೆ ರೇವಣ್ಣ ಅವರು ಗಳಗಳನೆ ಕಣ್ಣೀರು ಹಾಕಿದರು.

ಲಘು ಲಾಠಿ ಪ್ರಹಾರ: ಕಾರಾಗೃಹದ ಬಳಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು. ಸಿಟ್ಟಿಗೆದ್ದ ಕಾರ್ಯಕರ್ತರು, ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದರು.

‘ಕಾನೂನಿನ ಮೇಲೆ ಅಪಾರ ಗೌರವವಿದೆ. ನ್ಯಾಯಾಲಯದ ಆದೇಶ ಪಾಲಿಸುತ್ತೇನೆ. ನನಗೆ ದೇವರ ಮೇಲೆ ನಂಬಿಕೆ ಇದೆ. ಆರೋಪದಿಂದ ಮುಕ್ತನಾಗುತ್ತೇನೆ’ ಎಂದು ಎಚ್‌.ಡಿ.ರೇವಣ್ಣ ಪ್ರತಿಕ್ರಿಯಿಸಿದರು. ರೇವಣ್ಣ ಸಂಜೆ ನಗರದ ಕೆಲವು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ಸಂಭ್ರಮಿಸುವ ಸಮಯವಲ್ಲ: ಎಚ್‌ಡಿಕೆ ‘ರಾಜ್ಯದಲ್ಲಿ ಅತ್ಯಂತ ಹೀನಾಯ ಘಟನೆ ನಡೆದಿದೆ. ರೇವಣ್ಣ ಕೂಡಾ ಆರೋಪ ಎದುರಿಸಬೇಕಾಯಿತು. ಅವರಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಆದರೆ ಇದು ಪಟಾಕಿ ಸಿಡಿಸಿ ಸಂಭ್ರಮಿಸುವ ಸಮಯವಲ್ಲ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ‘ಇದು ರಾಜ್ಯವೇ ತಲೆ ತಗ್ಗಿಸುವಂತಹ ಘಟನೆ. ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾದಾಗ ಸಂಭ್ರಮಿಸೋಣ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.