ADVERTISEMENT

ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ: ತನಿಖೆಗೆ ಸಾ.ರಾ.ಮಹೇಶ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 11:33 IST
Last Updated 20 ಜನವರಿ 2021, 11:33 IST
ಸಾರಾ ಮಹೇಶ್‌
ಸಾರಾ ಮಹೇಶ್‌   

ಮೈಸೂರು: ‘ಕೃಷಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು. ಭ್ರಷ್ಟಾಚಾರ ಸಾಬೀತಾದರೆ, ಕೃಷಿ ಸಚಿವ ಬಿ.ಸಿ.ಪಾಟೀಲ ಅವರನ್ನು ಮುಲಾಜಿಲ್ಲದೇ ಮಂತ್ರಿಮಂಡಲದಿಂದ ಹೊರದಬ್ಬಬೇಕು’ ಎಂದು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಆಗ್ರಹಿಸಿದ್ದಾರೆ.

‘ಕೃಷಿ ಇಲಾಖೆಯಲ್ಲಿ, ವರ್ಗಾವಣೆ ಹೆಸರಿನಲ್ಲಿ ಸಚಿವರು ಹಾಗೂ ಅಧಿಕಾರಿಗಳಿಂದ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಇಲಾಖೆ ಸಿಬ್ಬಂದಿಯೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಸಮಸ್ಯೆ ಸರಿಪಡಿಸದಿದ್ದರೆ ಸಾಮೂಹಿಕವಾಗಿ ದಯಾಮರಣಕ್ಕೆ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ. ಈ ಭ್ರಷ್ಟಾಚಾರ ಆರೋಪ ಬಂದಿದ್ದು ಹೇಗೆ? ಇದು ಎಂಥ ದೌರ್ಬಲ್ಯ? ಕೃಷಿ ಇಲಾಖೆಯ ಸಿಬ್ಬಂದಿಯೇ ಮಾಡಿರುವ ಲಂಚದ ಆರೋಪದ ಕುರಿತು ಸಚಿವರೇ ಸ್ಪಷ್ಟನೆ ನೀಡಬೇಕು’ ಎಂದು ಅವರು ಸರಣಿ ಟ್ವೀಟ್‌ ಮಾಡಿದ್ದಾರೆ.

‘ಆತ್ಮಹತ್ಯೆ ಮಾಡಿಕೊಳ್ಳುವ ರೈತರು ದುರ್ಬಲ ಮನಸ್ಸಿನವರು ಎನ್ನುವ ಕೃಷಿ ಸಚಿವರು, ತಮ್ಮ ಹಣದ ದೌರ್ಬಲ್ಯದ ಬಗ್ಗೆ ಏಕೆ ಮಾತಾಡುವುದಿಲ್ಲ? ರೈತನ ಸಂಕಷ್ಟದ ಪರಿಸ್ಥಿತಿಯನ್ನು ಗೇಲಿ ಮಾಡುವ ಇವರ ವರ್ತನೆಯೇ ದುರ್ಬಲ ಮನಸ್ಸಿನ ಪ್ರತೀಕ. ಅವರ ವರ್ತನೆ ಅಕ್ಷಮ್ಯ. ಕೈಲಾದರೆ ರೈತರಿಗೆ ಒಳ್ಳೆಯದು ಮಾಡಿ, ಹೀಗೆಲ್ಲ ಮಾತನಾಡಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಕೃಷಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಇಲಾಖೆಯ ಸಿಬ್ಬಂದಿ, ಉಡುಪಿ ಜಿಲ್ಲೆಯ ಆರ್‌.ಪಿ.ವಿನೋದ್ ಎಂಬುವವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದಿದ್ದಾರೆ ಎನ್ನಲಾದ ಎರಡು ಪುಟಗಳ ಪತ್ರವನ್ನು ಟ್ವಿಟರ್‌ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.

‘ತಮ್ಮ ಅಧೀನದಲ್ಲಿರುವ ನೌಕರರು ವರ್ಗಾವಣೆ ಪಡೆಯಬೇಕಾದರೆ ಅಥವಾ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಚೇರಿಗಳಲ್ಲೇ ಮುಂದುವರಿಯಲು ಕೃಷಿ ಸಚಿವರಿಗೆ ಹಣ ಸಂದಾಯ ಮಾಡಬೇಕೆಂಬ ಸಬೂಬು ಹೇಳಿ ಇಲಾಖೆಯ ಹಿರಿಯ ಅಧಿಕಾರಿಗಳು, ಇಂತಿಷ್ಟು ಲಕ್ಷ ರೂಪಾಯಿಗಳನ್ನು ಕಡ್ಡಾಯವಾಗಿ ಕೊಡಬೇಕೆಂದು ಮೌಖಿಕ ಆದೇಶ ಹೊರಡಿಸಿದ್ದಾರೆ’ ಎಂಬ ವಿಚಾರ, ಆ ಸಿಬ್ಬಂದಿ ಬರೆದಿರುವ ಪತ್ರದಲ್ಲಿದೆ.

ಅಲ್ಲದೇ, ಕೃಷಿ ಸಚಿವ ಹಾಗೂ ಅಧಿಕಾರಿಗಳ ಹೇಳಿಕೆಗಳನ್ನು ಆಡಿಯೊ ಹಾಗೂ ವಿಡಿಯೊ ಕೂಡ ಮಾಡಲಾಗಿದೆ ಎಂದು ಪತ್ರದಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.