ಕಲಬುರಗಿ: 'ರಾಜ್ಯ ಸರ್ಕಾರ ಬರೀ ಯೋಜನೆಗಳ ಘೋಷಣೆಗೆ ಸೀಮಿತವಾಗಿದೆ. ಆ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ರಾಜ್ಯವನ್ನು ಅಭಿವೃದ್ಧಿಯ ದಿಕ್ಕೆ ತೆಗೆದುಕೊಂಡಲು ಹೋಗಲು ವಿಫಲವಾಗಿದೆ. ಘೋಷಿಸಿದ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಖಜಾನೆಯಲ್ಲಿ ದುಡ್ಡಿದಿಯೋ ಇಲ್ಲವೋ, ದುಡ್ಡಿದ್ದರೆ ಅದನ್ನು ಎಲ್ಲಿ ವೆಚ್ಚ ಮಾಡಲಾಗುತ್ತಿದೆ ಎಂಬುದಕ್ಕೆ ಸರ್ಕಾರ ಉತ್ತರಿಸಬೇಕು' ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕಲಬುರಗಿ ನಗರದ ರಸ್ತೆಗಳಲ್ಲೆ ಸಾಕಷ್ಟು ಗುಂಡಿಗಳು ಬಿದ್ದಿವೆ. ಕಲ್ಯಾಣದ ಅಭಿವೃದ್ಧಿಗೆ ₹5 ಸಾವಿರ ಕೋಟಿ ಕೊಟ್ಟಿರುವುದಾಗಿ ಸರ್ಕಾರ ಹೇಳುತ್ತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿ ಬೆಟ್ಟದ ಬಳಿ ಕಾರ್ಯಕ್ರಮ ಮಾಡಿ ಮೂರ್ನಾಲ್ಕು ಸಾವಿರ ಕೋಟಿ ಮೊತ್ತದ ಯೋಜನೆ ಘೋಷಿಸುತ್ತಾರೆ. ಮಲೆ ಮಹಾದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಕೆಲವು ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆ, ವಿಜಯಪುರದಲ್ಲಿ ಒಂದಿಷ್ಟು ಸಾವಿರ ಕೋಟಿ ಯೋಜನೆ ಘೋಷಿಸುತ್ತಾರೆ. ಆದರೆ, ಕಲಬುರಗಿಯಲ್ಲಿ ಹೊಸ ರಸ್ತೆ ನಿರ್ಮಿಸುವುದು ಬಿಡಿ, ಗುಂಡಿಗಳನ್ನೂ ಮುಚ್ಚುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ಆ ಗುಂಡಿ ಮುಚ್ಚುವ ಕೆಲಸವನ್ನು ಕನಿಷ್ಠ ಕಲಬುರಗಿಯಿಂದಲಾದರೂ ಆರಂಭಿಸಲಿ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಕೆಕೆಆರ್‌ಡಿಬಿ ಕೆಲಸಗಳನ್ನು ಶೇ 30 ಪರ್ಸೆಂಟ್‌ಗೆ ಲ್ಯಾಂಡ್ ಆರ್ಮಿಗೆ (ಕೆಆರ್‌ಐಡಿಎಲ್) ಮಾರ್ಕೊಂಡಾಗಿ ಹೋಗಿದೆ. ಕೆಕೆಆರ್‌ಡಿಬಿ ಇರೋದೇ ದುಡ್ಡು ಮಾಡೋದಕ್ಕೆ, ಕಮಿಷನ್ ಹೊಡೆಯೋದಕ್ಕೆ, ಪರ್ಸಂಟೇಜ್ ರಾಜಕಾರಣಕ್ಕೆ ಇಟ್ಟುಕೊಂಡಿರೋದು. ಅಭಿವೃದ್ಧಿ ವಿಷಯ ಬಂದಾಗ ಕೆಕೆಆರ್‌ಡಿಬಿ ಹೆಸರನ್ನು ಮುನ್ನಲೆಗೆ ತರುತ್ತದೆ ಅಷ್ಟೇ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.