ADVERTISEMENT

ದೇವೇಗೌಡರ ಮನೆ ಮುಂದೆ ನಿಂತಿದ್ದ ಕೃಷ್ಣ: ಜೆಡಿಎಸ್ ಮುಖಂಡ ರಮೇಶ್ ಬಾಬು

ಕುರ್ಚಿಗಾಗಿ ಎಲ್ಲ ಪಕ್ಷಗಳ ಬಾಗಿಲು ತಟ್ಟಿದ ಗೌಡರು– ರವಿಕುಮಾರ್‌ ಟೀಕೆ l ಕ್ಷುಲ್ಲಕ ಹೇಳಿಕೆ ಹಿಂತೆಗೆದುಕೊಳ್ಳಿ– ಪ‍್ರಕಾಶ್‌

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 19:45 IST
Last Updated 25 ಡಿಸೆಂಬರ್ 2019, 19:45 IST
ಕೃಷ್ಣ ಅವರ ಪುಸ್ತಕದ ಮುಖಪುಟ
ಕೃಷ್ಣ ಅವರ ಪುಸ್ತಕದ ಮುಖಪುಟ   

ಬೆಂಗಳೂರು:‘ಎಸ್‌.ಎಂ.ಕೃಷ್ಣ ಅವರು 2004ರಲ್ಲಿ ಸೋತರೂ ಜೆಡಿಎಸ್‌ ಬೆಂಬಲದೊಂದಿಗೆ ಮತ್ತೆಮುಖ್ಯಮಂತ್ರಿಯಾಗಲು ಬಯಸಿ ದೇವೇಗೌಡರ ಮನೆ ಮುಂದೆ ನಿಂತಿದ್ದರು. ಈ ಸತ್ಯವನ್ನೂ ಕೃಷ್ಣ ಅವರು ತಮ್ಮ ಪುಸ್ತಕದಲ್ಲಿ ದಾಖಲಿಸಲಿ’ ಎಂದು ಜೆಡಿಎಸ್‌ ಮುಖಂಡ ರಮೇಶ್‌ ಬಾಬು ಹೇಳಿದ್ದಾರೆ.

ಕೃಷ್ಣ ಅವರ ಪುಸ್ತಕದಲ್ಲಿ ಉಲ್ಲೇಖಿತವಾದ ಸಂಗತಿಗಳ ಬಗೆಗೆ ಟ್ವೀಟ್‌ ಮಾಡಿರುವ ಅವರು, ‘ಆತ್ಮಚರಿತ್ರೆಗಳು ನಮಗೆ ಮಾಹಿತಿ ನೀಡುವುದರ ಜತೆಗೆ ದಾರಿದೀಪವಾಗಬೇಕು, ಸತ್ಯವನ್ನು ಮರೆಮಾಚಬಾರದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ದೇವೇಗೌಡರು ಕಾಂಗ್ರೆಸ್‌ ಸೇರಲು ಬಯಸಿದ್ದರು ಎಂಬುದನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ನೋಡಬೇಕಿದೆ. ದೇಶದಲ್ಲಿ ಸ್ವಾತಂತ್ರ್ಯ ಚಳವಳಿ ರೂಪಿಸಿದ ಕಾಂಗ್ರೆಸ್‌ ಬಹುತೇಕ ಪಕ್ಷಗಳಿಗೆ ಮೂಲ ಪಕ್ಷವಾಗಿದೆ. ಎಸ್‌.ಎಂ.ಕೃಷ್ಣ ಅವರು ಪಿಎಸ್‌ಪಿ ಪಕ್ಷದವರಾಗಿದ್ದು, ಅವರು ಕೂಡ ಮೂಲ ಕಾಂಗ್ರೆಸಿಗರಲ್ಲ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಬಿಜೆಪಿ–ಜೆಡಿಎಸ್ ವಾಗ್ವಾದ:‘ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಅಧಿಕಾರ ಮತ್ತು ಕುರ್ಚಿಗಾಗಿ ಎಲ್ಲ ಪಕ್ಷಗಳ ಬಾಗಿಲು ತಟ್ಟಿದ್ದಾರೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ನೀಡಿರುವ ಹೇಳಿಕೆಗೆ ಜೆಡಿಎಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

‘ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗೆ ಸಿದ್ಧಾಂತ ಮತ್ತು ಆದರ್ಶ ಎಂಬುದೇ ಇಲ್ಲ. ಇವರು ಬಿಜೆಪಿ, ಕಾಂಗ್ರೆಸ್‌ ಮತ್ತು ಕಮ್ಯುನಿಸ್ಟ್‌ ಪಕ್ಷ, ಹೀಗೆ ಕಾಲಕ್ಕೆ ತಕ್ಕಂತೆ ವಿವಿಧ ಪಕ್ಷಗಳ ಬಾಗಿಲು ತಟ್ಟಿದ್ದಾರೆ. ಅದು ಕೇವಲ ಅಧಿಕಾರಕ್ಕಾಗಿ’ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಬಿ.ಎಸ್‌.ಯಡಿಯೂರಪ್ಪ ಅವರು ಮಂತ್ರಿ ಆಗುವ ಉದ್ದೇಶದಿಂದ ತಮ್ಮ ಮನೆಯ ಅಡ್ರೆಸ್‌ ಹುಡುಕಿಕೊಂಡು ಬಂದಿದ್ದರು’ ಎಂದು ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಕಟುವಾಗಿ ಟೀಕಿಸಿದ ರವಿಕುಮಾರ್, ತುಮಕೂರಿನಲ್ಲಿ ದೇವೇಗೌಡರನ್ನು, ಮಂಡ್ಯದಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಸೋಲಿಸುವ ಮೂಲಕ ಜನ ಅವಕಾಶವಾದಿ ರಾಜಕಾರಣಕ್ಕೆ ಪಾಠ ಕಲಿಸಿದ್ದಾರೆ ಎಂದು
ಹೇಳಿದರು.

‘ಬಿಜೆಪಿಯ ರವಿಕುಮಾರ್ ಅವರಿಗೆ ದೇವೇಗೌಡರ ಬಗ್ಗೆ ಮಾತನಾಡುವ ಅರ್ಹತೆ ಅಥವಾ ಯೋಗ್ಯತೆ ಇಲ್ಲ. 60 ವರ್ಷದ ಸುದೀರ್ಘ ರಾಜಕೀಯ ಜೀವನದಲ್ಲಿ ಎಂದಿಗೂ ಪಕ್ಷಾಂತರ ಮಾಡಿಲ್ಲ.ಪ್ರಧಾನಿ ಹುದ್ದೆಯನ್ನೇ ಕಳೆದುಕೊಳ್ಳುವ ಸಂದರ್ಭ ಬಂದಾಗ ಅಂದಿನ ಲೋಕಸಭೆಯ ವಿರೋಧ ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ದೇವೇಗೌಡರಿಗೆ ಬೆಂಬಲ ನೀಡಲು ಬಂದಿದ್ದರು. ಅದನ್ನು ಕೂಡ ಗೌಡರು ತಿರಸ್ಕರಿಸಿದ್ದರು’ ಎಂದು ಜೆಡಿಎಸ್‌ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್ ಹೇಳಿದ್ದಾರೆ.

‘ದೇವೇಗೌಡರ ಬಗ್ಗೆ ಮಾತನಾಡುವ ಯೋಗ್ಯತೆ ಈ ದೇಶದ ರಾಜಕಾರಣಿಗಳಲ್ಲಿ ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ಇದೆ. ಬಿಜೆಪಿ ಕಟ್ಟಿ ಬೆಳೆಸಿದ ಎಲ್.ಕೆ. ಅಡ್ವಾಣಿ ಅವರಿಗೆ ದೇವೇಗೌಡರು ಏನು ಎಂಬುದು ಗೊತ್ತು. ಈ ರೀತಿ ಕ್ಷುಲ್ಲಕ ಹೇಳಿಕೆಗಳನ್ನು ರವಿಕುಮಾರ್ ಹಿಂತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.