ADVERTISEMENT

ಬೆಂಗಳೂರು ಮಳೆ: ಬಿಜೆಪಿ ಬುರುಡೆ ಪಾರ್ಟಿ ಎಂದ ಎಚ್‌ಡಿ ಕುಮಾರಸ್ವಾಮಿ

ಬೆಂಗಳೂರಿನಲ್ಲಿ ಮಳೆಯಿಂದ ಜನರಿಗೆ ಸಂಕಷ್ಟ ಎದುರಾಗಿರುವ ಕುರಿತು ಕುಮಾರಸ್ವಾಮಿ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಮೇ 2022, 15:40 IST
Last Updated 18 ಮೇ 2022, 15:40 IST
ಎಚ್‌ ಡಿ ಕುಮಾರಸ್ವಾಮಿ
ಎಚ್‌ ಡಿ ಕುಮಾರಸ್ವಾಮಿ   

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಜನಜೀವನ ಸಂಕಷ್ಟ ಎದುರಿಸುತ್ತಿದ್ದು, ಬಿಜೆಪಿ ಸರ್ಕಾರ ಜನರ ನೆರವಿಗೆ ಬರುತ್ತಿಲ್ಲ ಎಂದು ಜೆಡಿಎಸ್ ನಾಯಕ ಎಚ್‌ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಈ ಕುರಿತು ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಎಂಬ ಬುರುಡೆ ಪಾರ್ಟಿ ಎಂದು ಟೀಕಿಸಿದ್ದಾರೆ.

ಒಂದು ರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಬೆಂಗಳೂರು ತತ್ತರಿಸಿದೆ. 'ಬಿಜೆಪಿ ಎಂಬ ಬುರುಡೆ ಪಾರ್ಟಿ 'ಮಳೆ ಬಗ್ಗೆ, ಜನರ ಕಷ್ಟದ ಬಗ್ಗೆ ಕೇಳುವುದು ಬಿಟ್ಟು, ಜೆಡಿಎಸ್ ಮತ್ತು ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಿದೆ. ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದು ಹೊರಟವರು ಕೆಂಪೇಗೌಡರು ಕಟ್ಟಿದ ಭವ್ಯ ಬೆಂಗಳೂರು ನಗರವನ್ನು ಸ್ವಿಮ್ಮಿಂಗ್ ಪೂಲ್ ಮಾಡುತ್ತಿದ್ದಾರೆ! ರಸ್ತೆಗಳು ರಾಜ ಕಾಲುವೆಗಳಾಗಿ, ಮನೆಗಳು ಕೆರೆಗಳಾಗಿವೆ.

ADVERTISEMENT

ಈ ತಿಂಗಳ 13ನೇ ತಾರೀರಿಗೆಮುಗಿದ ಜಲಧಾರೆ ಸಮಾರೋಪ ಸಮಾವೇಶದ ಬಗ್ಗೆ ಆರು ದಿನ ಅಧ್ಯಯನ ಮಾಡಿ ಟ್ವೀಟ್ ಮಾಡಿದೆ ಬಿಜೆಪಿ. ಇನ್ನೂ ಆರಂಭವಾಗದ ಪಂಚರತ್ನ ಯಾತ್ರೆ ಬಗ್ಗೆ ಆಗಲೇ ಏರಿದೆ ಬೀಪಿ. ಮಿಷನ್ 123 ನಮ್ಮ ಗುರಿ. ನಿಮಗೆ ಯಾಕೆ ಉರಿ?

ಜೆಡಿಎಸ್‌ನಲ್ಲಿ 1+2+3 ಸಂಖ್ಯಾಬಲ ಇದೆ, ಸರಿ. ಆದರೆ, ಭಾರೀ ಕುಳಗಳ ಬಿಜೆಪಿಯಲ್ಲಿ 1+2 / 1+2+3 ಲೆಕ್ಕವೇ ಇಲ್ಲ. ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ತುಮಕೂರು ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಅದರ ಗರ್ಭಗುಡಿಯಲ್ಲಿ 1+2 / 1+2+3ಗಳ ಕುಟುಂಬ ಶಿಶುಗಳೇ ತುಂಬಿವೆ.

ಯಡಿಯೂರಪ್ಪ, ಶೆಟ್ಟರ್, ನಿರಾಣಿ, ಜಾರಕಿಹೊಳಿ, ಜೊಲ್ಲೆ..ಒಂದಾ.. ಎರಡಾ? ಪಟ್ಟಿ ಮಾಡುತ್ತಾ ಹೋದರೆ ಅದೇ ಹನುಮನ ಬಾಲ. ಈಗ ಬಿಜೆಪಿಗರು ಹೇಳಬೇಕು, 1+2 / 1+2+3 ಇರುವುದು ಎಲ್ಲಿ? ಈ ವಿಷಯದಲ್ಲಿ ಬಿಜೆಪಿಯದ್ದು ರಾಷ್ಟ್ರೀಯದಾಖಲೆ.

ಕುಟುಂಬವಾದ, ಹೋದ ಕಡೆಯೆಲ್ಲ ಸುಖವಾದದಲ್ಲಿ ತೇಲಿ ತೆವಳುವ ಬಿಜೆಪಿಯ ಸುಖ ಸಿದ್ಧಾಂತಕ್ಕೆ ರಣರೋಚಕ ಇತಿಹಾಸವೇ ಇದೆ. ಬ್ರಿಟಿಷರ ಬಚ್ಚಲು ಬಾಚಿದ ಅವರಿಗೆ ತಮ್ಮ ಕಪಟ ನೀತಿಗೆ ವಿರುದ್ಧವಾಗಿದ್ದ ರಾಷ್ಟ್ರೀಯವಾದ ಎಂಬ ಏಣಿ ಹತ್ತಿ ತಾನು ರಕ್ಕಸರೂಪ ತಾಳಿದ್ದು ಮರೆತಿದೆಯಾ?

ಹೌದು. ಜೆಡಿಎಸ್‌ನಲ್ಲಿ ಪಂಚರತ್ನಗಳಿವೆ, ನಿಜ. ಬಿಜೆಪಿಯಲ್ಲಿ ಸೀಡಿರತ್ನಗಳು, 40% ಕಮಿಷನ್ ರತ್ನಗಳು, ಜನರ ಹಣದ ಲೂಟಿ ರತ್ನಗಳು, ಕಾಸಿಗಾಗಿ ಕೆಲಸ ಮಾರಿಕೊಳ್ಳುವ ರತ್ನಗಳು, ಪಿಎಸ್‌ಐ ಕಿಂಗ್ ಪಿನ್ ರತ್ನಗಳು, ಮಾಧ್ಯಮಗಳ ವಿರುದ್ಧ ಕೋರ್ಟ್ ಸ್ಟೇ ತಂದ ರತ್ನಗಳು, ಸದನದಲ್ಲೇ ನೀಲಿಚಿತ್ರ ನೋಡಿದ ರತ್ನಗಳು ಕೂಡ ಇವೆ. ಅಲ್ಲವೇ?

123 ನಮ್ಮ ಗುರಿ. ನಮ್ಮ ಹೋರಾಟ ನಮ್ಮದು. ಬಿಜೆಪಿಗೆ ಇಲ್ಲಿ ಒಂದು ಸೀಟು ಗೆಲ್ಲಬೇಕಾದರೂ ಮೋದಿಯೇ ಗತಿ. 123 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳ ಮಾತು ಹಾಗಿರಲಿ. ನಿಮಗಿದ್ದಾರಾ? ಅಭ್ಯರ್ಥಿಗಳಿಗೆ ದಿಕ್ಕಿಲ್ಲದೆ, ಅಕ್ಕಪಕ್ಕದ ಪಕ್ಷಗಳ ನಾಯಕರ ಮನೆ ಬಾಗಿಲ ನೆಲ ನೆಕ್ಕುವ ನೀವಾ ನಮ್ಮ ಬಗ್ಗೆ ಮಾತನಾಡುವುದು.

ಜನತಾ ಪರಿವಾರ ದೇವೇಗೌಡ ಆಂಡ್ ಸನ್ಸ್ ಅನ್ನುವವರ ಕಣ್ಣುಗಳಿಗೆ ಕಾಮಾಲೆಯಾ? ಬಿಜೆಪಿಯಲ್ಲಿರುವ ಸನ್ಸ್, ಬ್ರದರ್ಸ್ ಮತ್ತು ಫ್ಯಾಮಿಲಿ ಪಾಲಿಟಿಕ್ಸ್ ಬಗ್ಗೆ ಕುರುಡಾ?

ಯಡಿಯೂರಪ್ಪ & ಸನ್ಸ್, ಶೆಟ್ಟರ್ -ನಿರಾಣಿ & ಬ್ರದರ್ಸ್, ಜೊಲ್ಲೆ & ಹಸ್ಬೆಂಡ್,ಉದಾಸಿ & ಸನ್ಸ್, ಜಾರಕಿಹೊಳಿ & ಬ್ರದರ್ಸ್, ಲಿಂಬಾವಳಿ ಭಾವ ಬಾಮೈದ, ಅಂಗಡಿ & ಫ್ಯಾಮಿಲಿ, ಬಸವರಾಜು & ಸನ್, ಕತ್ತಿ & ಬ್ರದರ್ಸ್, ಅಪ್ಪಚ್ಚು ರಂಜನ್ & ಬ್ರದರ್. ಕೊನೆಗೆ, ಬಳ್ಳಾರಿಯ ರೆಡ್ಡಿ & ಬ್ರದರ್ಸ್, ಶ್ರೀರಾಮುಲು & ಸಿಸ್ಟರ್.. ಪಟ್ಟಿ ಸಾಕಾ? ಇನ್ನೂ ಬೇಕಾ? ದಿಲ್ಲಿಯಿಂದ ಹಳ್ಳಿ ತನಕ ಕುಟುಂಬ ರಾಜಕಾರಣದ ಕೊಳದಲ್ಲಿ ಬಿಜೆಪಿ ಮಿಂದೇಳುತ್ತಿರುವುದು ಸುಳ್ಳಾ?

ನನ್ನನ್ನು ಲಕ್ಕಿ ಡಿಪ್ ಸಿಎಂ ಎನ್ನುವ ಬಿಜೆಪಿಗೆ, ತನ್ನ ಸಿಎಂಗಳೆಲ್ಲರೂ ಆಪರೇಷನ್ ಕಮಲದ ಕೆಸರಿನಲ್ಲಿ ಡಿಪ್ ಆದವರು ಎನ್ನುವುದು ಗೊತ್ತಿಲ್ಲವೆ? #ಬಿಜೆಪಿ ಅಂದರೆ #ಬುರುಡೆಜಾಗಟೆಪಾರ್ಟಿ ಎಂದು ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.