ADVERTISEMENT

ಮೋದಿ ಸಂಪುಟದಲ್ಲೇ ಮುಸ್ಲಿಮರಿದ್ದಾರೆ, ಜೆಡಿಎಸ್‌ ಕೂಡ ಅವಕಾಶ ನೀಡಲಿ: ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 10:20 IST
Last Updated 11 ಜೂನ್ 2019, 10:20 IST
   

ಬೆಂಗಳೂರು:ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ತಮ್ಮ ಸಂಪುಟದಲ್ಲಿ ಮುಸ್ಲಿಮರೊಬ್ಬರನ್ನು ಮಂತ್ರಿ ಮಾಡಬೇಕು ಎಂದು ಜೆಡಿಎಸ್‌ ನಾಯಕ ಎಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಶ್ವನಾಥ್‌,‘ಪ್ರಧಾನಿ ನರೇಂದ್ರಮೋದಿ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಮುಸ್ಲಿಮರಿಗೆ ಅವಕಾಶ ನೀಡಿದ್ದಾರೆ. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮುಮ್ತಾಜ್ ಅಲಿ ಖಾನ್ ಅವರನ್ನು ಮಂತ್ರಿ ಮಾಡಿದ್ದರು. ಜಾತ್ಯತೀತ ಪಕ್ಷವಾದ ಜೆಡಿಎಸ್‌ ಕೂಡ ಮುಸ್ಲಿಮರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು.ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಜೆಡಿಎಸ್ ವತಿಯಿಂದ ಮುಸ್ಲಿಮರಿಗೆ ಒಂದೂ ಮಂತ್ರಿ ಸ್ಥಾನ ನೀಡಿಲ್ಲ. ಖಾಲಿ ಇದ್ದ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನವನ್ನು ಮುಸ್ಲಿಮರಿಗೆ, ಮತ್ತೊಂದು ಸ್ಥಾನವನ್ನು ದಲಿತರಿಗೆ ಈ ಹಿಂದೆಯೇ ನೀಡಬೇಕಿತ್ತು,’ ಎಂದು ವಿಷಾದಿಸಿದರು

‘ದೇಶದ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರು ನಮಗೆ ನಿರೀಕ್ಷಿತ ಬೆಂಬಲ ನೀಡದಿರಬಹುದು. ಆದರೆ ಇತ್ತೀಚಿನ ನಗರಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬೆಂಬಲ ನೀಡಿದ್ದಾರೆ.ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಗೆದ್ದವರ ಪೈಕಿ ಶೇಕಡಾ ನಲವತ್ತರಷ್ಟು ಮಂದಿ ಮುಸ್ಲಿಮರು ಎಂದು ಪಕ್ಷದ ವರಿಷ್ಠದೇವೇಗೌಡರೇ ಸಂತಸ ವ್ಯಕ್ತಪಡಿಸಿದ್ದಾರೆ.ತೆಲಂಗಾಣದಲ್ಲಿ, ಸೀಮಾಂಧ್ರದಲ್ಲಿ ಮುಸ್ಲಿಮರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ,’ಎಂದು ಅವರು ಉದಾಹರಿಸಿದರು.

ADVERTISEMENT

ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ‘ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಮತ್ತೆ ಆ ಸ್ಥಾನದಲ್ಲಿ ಮುಂದುವರಿಯುವ ಪ್ರಶ್ನೆಯೇ ಇಲ್ಲ. ರಾಜೀನಾಮೆ ಅಂಗೀಕಾರ ಅಗುವ ವಿಶ್ವಾಸವಿದೆ,’ ಎಂದರು.

ಇನ್ನು ಸಚಿವ ಸ್ಥಾನದ ಆಕಾಂಕ್ಷಿಯೇ ಎಂದು ಕೇಳಿದ ಪ್ರಶ್ನೆಗೆ, ‘ಸಚಿವ ಸ್ಥಾನ ನೀಡಿದರೆ ಬೇಡ ಎನ್ನಲಾರೆ. ಇಲ್ಲದಿದ್ದರೆನಾನು ಸಾಮಾನ್ಯ ಶಾಸಕನಾಗೇ ಇರುತ್ತೇನೆ,’ ಎಂದರು

ಯಾದಗಿರಿಯಲ್ಲಿ ರೈತರ ಬ್ಯಾಂಕ್ ನಿಂದ ಹಣ ವಾಪಸ್ ಆದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ರಾಷ್ಟ್ರೀಯ ಬ್ಯಾಂಕ್‌ಗಳು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತವೆ. ಇದಕ್ಕೆ ಕೇಂದ್ರ ಸರ್ಕಾರ ಜವಾಬ್ದಾರಿ.ಈ ಬಗ್ಗೆ ಬಿಜೆಪಿ ಅವರನ್ನು ಪ್ರಶ್ನೆ ಮಾಡಬೇಕು,’ ಎಂದು ವಿಶ್ವನಾಥ್‌ ಹೇಳಿದರು.

ಜಿಂದಾಲ್ ಭೂಮಿ ಮಂಜೂರು ಮಾಡದಂತೆ ಕಾಂಗ್ರೆಸ್‌ನ ಹಿರಿಯ ನಾಯಕ ಎಚ್‌.ಕೆ ಪಾಟೀಲರು ಸರ್ಕಾರಕ್ಕೆ ಪತ್ರ ಬರೆದಿರುವ ಕುರಿತು ಮಾತನಾಡಿ, ‘ಎಚ್.ಕೆ. ಪಾಟೀಲ್ ಅಭಿಪ್ರಾಯ ಸರಿಯಾಗಿದೆ. ಪಾಟೀಲರು ಹಿರಿಯ ರಾಜಕಾರಣಿ. ಹಲವು ಇಲಾಖೆಯಲ್ಲಿ ಮಂತ್ರಿ ಆಗಿದ್ದರು.ಭೂಮಿ ನೀಡುವುದರಿಂದ ಏನು ಸಮಸ್ಯೆ ಆಗುತ್ತದೆಎಂದು ಪತ್ರದ ಮೂಲಕ ಅವರು ಎಚ್ಚರಿಕೆ ನೀಡಿದ್ದಾರೆ. ಪಾಟೀಲರ ಧ್ವನಿಗೆ ನಾನು ದನಿಗೂಡಿಸುತ್ತೇನೆ. ಸಂಪುಟ ಸಭೆಯಲ್ಲಿ ಇನ್ನೊಂದು ಬಾರಿ ಚರ್ಚೆ ಮಾಡಿ ಭೂಮಿ ಮಂಜೂರಾತಿಯನ್ನು ಕೈ ಬಿಡಬೇಕು,’ ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.