ADVERTISEMENT

ಮೊಬೈಲ್‌ ಬಿಟ್ಟೆ, ರ‍್ಯಾಂಕ್ ಬಂತು: ರಾಜ್ಯದ ಟಾಪರ್‌ ಕೇವಿನ್‌ ಮಾರ್ಟಿನ್‌

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 6:20 IST
Last Updated 20 ಜನವರಿ 2019, 6:20 IST
   

ಬೆಂಗಳೂರು: ‘ಸ್ಮಾರ್ಟ್‌ಫೋನ್‌ ಬಳಸುವುದನ್ನು ನಿಲ್ಲಿಸಿದ್ದರಿಂದಲೇ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಹಾಯವಾಯಿತು’ ಎಂದು ಜೆಇಇ ಮುಖ್ಯ ಪರೀಕ್ಷೆಯ ಮೊದಲ ಪತ್ರಿಕೆಯಲ್ಲಿ (ಬಿ.ಇ, ಬಿ.ಟೆಕ್‌) ಶೇ 100 ಅಂಕ ಗಳಿಸಿರುವ ಹಾಗೂ ರಾಜ್ಯಕ್ಕೆ ಟಾಪರ್‌ ಆಗಿರುವ ಕೇವಿನ್‌ ಮಾರ್ಟಿನ್‌ ಯಶಸ್ಸಿನ ಗುಟ್ಟು ಹೇಳಿದರು.

‘ಈ ಮೊದಲು ಫೋನ್‌ ಅನ್ನು ಹೆಚ್ಚು ಬಳಸುತ್ತಿದ್ದೆ. ಒಂದು ವರ್ಷದಿಂದ ಅದನ್ನು ದೂರವಿರಿಸಿ ಅಧ್ಯಯನದ ಕಡೆ ಗಮನ ಹರಿಸಿದೆ. ಕೋಚಿಂಗ್‌ ಕೇಂದ್ರದ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರಿಂದ ಓದಿಗೆ ಹೆಚ್ಚು ಸಮಯ ಸಿಕ್ಕಿತು’ ಎಂದು ತಿಳಿಸಿದರು.‘ಜೆಇಇ ಅಡ್ವಾನ್ಸ್‌ ಪರೀಕ್ಷೆಯಲ್ಲೂ ಉತ್ತಮ ಅಂಕಗಳಿಂದ ತೇರ್ಗಡೆಯಾಗಲು ಪ್ರಯತ್ನಿಸುವೆ’ ಎಂದು ಮುಂದಿನ ಗುರಿ ತಿಳಿಸಿದರು.

ಈ ತಿಂಗಳ ಪ್ರಾರಂಭದಲ್ಲಿ ನಡೆದಿದ್ದ ಜಂಟಿ ಪ್ರವೇಶ ಪರೀಕ್ಷೆ (ಜೆಇಇ)ಯ ಮುಖ್ಯಪರೀಕ್ಷೆಯ ಫಲಿತಾಂಶವನ್ನು ಶನಿವಾರ ಪ್ರಕಟಿಸಲಾಗಿದ್ದು, 15 ಅಭ್ಯರ್ಥಿಗಳು ಶೇ 100ರಷ್ಟು ಅಂಕ ಗಳಿಕೆಯ ಸಾಧನೆ ಮಾಡಿದ್ದಾರೆ.

ADVERTISEMENT

ನಗರದ ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್‌ನಲ್ಲಿ ಮಾರ್ಟಿನ್ ಕೋಚಿಂಗ್ ಪಡೆದುಕೊಂಡಿದ್ದರು.‘ಸತತ ಎರಡು ವರ್ಷಗಳ ಪರಿಶ್ರಮದಿಂದ ಇಷ್ಟು ಅಂಕ ಪಡೆದುಕೊಳ್ಳಲು ಸಾಧ್ಯವಾಯಿತು’ ಎಂದು ಮಾರ್ಟಿನ್ ಹೇಳಿದರು.

‘ಮೊದಲ ವರ್ಷದಲ್ಲಿ ನಾನು ಬಹಳಷ್ಟು ಸಮಯವನ್ನು ಸ್ಮಾರ್ಟ್‌ಫೋನ್ ನೋಡಲು ಬಳಸಿದ್ದೆ. ಇದು ಅರಿವಾದ ನಂತರ ಎರಡನೇ ವರ್ಷದಿಂದ ಸ್ಮಾರ್ಟ್‌ಫೋನ್ ದೂರವಿಟ್ಟೆ. ಅಭ್ಯಾಸಕ್ಕೆ ಹೆಚ್ಚು ಸಮಯ ಸಿಗಬೇಕು ಎಂದು ಇನ್‌ಸ್ಟಿಟ್ಯೂಟ್‌ನ ಹಾಸ್ಟೆಲ್‌ನಲ್ಲಿಯೇ ಉಳಿದುಕೊಂಡಿದ್ದೆ.ಇತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತೇನೆ. ಆದರೆ ಜೆಇಇ ಅಡ್ವಾನ್ಸ್‌ಡ್ ನನ್ನ ಆದ್ಯತೆ’ ಎಂದು ಹೇಳಿದರು.

ಜೆಇಇ (ಮೇನ್) ಪರೀಕ್ಷೆಗಳು ದೇಶದ 258 ನಗರಗಳಲ್ಲಿ ಜ.8ರಿಂದ 12ರವರೆಗೆ ಎರಡು ಹಂತಗಳಲ್ಲಿ ನಡೆದಿತ್ತು. 9.29 ಲಕ್ಷ ಅಭ್ಯರ್ಥಿಗಳು ಪೇಪರ್–1 (ಬಿಇ/ಬಿ–ಟೆಕ್) ಪರೀಕ್ಷೆ ಬರೆದಿದ್ದರು. ಶೇ 99.977 ರಷ್ಟು ಅಂಕ ಪಡೆದಿರುವ ಸುಂದರರಾಜನ್ ಶ್ರೀನಿವಾಸನ್ ಮತ್ತು ಶೇ 99.96 ರಷ್ಟು ಅಂಕಪಡೆದಿರುವಶಶಾಂಕ್ ಕೆ.ಜೆ. ನಗರದ ಬೇಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಅಭ್ಯಾಸ ಮಾಡಿದವರು.ಶೇ 99.95 ಅಂಕ ಪಡೆದಿರುವಕೌಸ್ತುಭ್ ರಾಯ್ ನಗರದFITJEE ಇನ್‌ಸ್ಟಿಟ್ಯೂಟ್‌ನಲ್ಲಿ ಅಭ್ಯಾಸ ಮಾಡಿದ್ದರು.

‘ಪರೀಕ್ಷೆ ಮುಗಿದ ನಂತರ ನಾನು ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು ಎನಿಸಿತು. ಎರಡು ಪಶ್ನೆಗಳಿಗೆ ಕೊಟ್ಟಿದ್ದ ಎಲ್ಲ ಉತ್ತರದ ಆಯ್ಕೆಗಳೂ ತಪ್ಪಿದ್ದವು. ಈ ಕುರಿತುಎನ್‌ಟಿಎಯನ್ನು (NTA- National Testing Agency) ಪ್ರಶ್ನಿಸಿದ್ದೇನೆ. ಸಿದ್ಧತೆ ಮಾಡಿಕೊಳ್ಳಲು ಉಪನ್ಯಾಸಕರು ಸಾಕಷ್ಟು ಸಹಕರಿಸಿದರು. ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಾಗ ನಿದ್ದೆಯ ಅವಧಿ ಕಡಿಮೆಯಾಗದಂತೆ ಎಚ್ಚರ ವಹಿಸಿದೆ. ಇದೂ ಸಹ ಉತ್ತಮ ಸಾಧನೆಗೆ ಕಾರಣವಾಯಿತು’ ಎಂದು ಶ್ರೀನಿವಾಸನ್ ಪ್ರತಿಕ್ರಿಯಿಸಿದರು.

‘ಜೆಇಇ 2ನೇ ಹಂತದ ಪರೀಕ್ಷೆಗಳು ಏಪ್ರಿಲ್‌ನಲ್ಲಿ ನಡೆಯಲಿವೆ. ನಂತರ ರ‍್ಯಾಂಕ್‌ಗಳನ್ನು ಘೋಷಿಸಲಾಗುವುದು’ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.