ADVERTISEMENT

ಹಲವು ಅನುಮಾನ | ನಡೆದುಕೊಂಡು ಹೋಗುತ್ತಿದ್ದ ಜಾರ್ಖಂಡ್‌ ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 7 ಮೇ 2020, 15:46 IST
Last Updated 7 ಮೇ 2020, 15:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಲಾಕ್‌ಡೌನ್ ಹಿನ್ನೆಲೆಯಲ್ಲಿ ಖಾನಾಪುರದಿಂದ ಜಾರ್ಖಂಡ್‌ಗೆ ನಡೆದುಕೊಂಡು ಹೊರಟಿದ್ದ 13 ಕಾರ್ಮಿಕರನ್ನು ತಡೆದು ಗುರುವಾರ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸುವ ವೇಳೆ ಒಬ್ಬ ಕಾರ್ಮಿಕ ಮರಣ ಹೊಂದಿದ್ದಾರೆ.

ಮೃತರನ್ನು ಬಾಬುಲಾಲ್ ಸಿಂಗ್ (45) ಎಂದು ಗುರುತಿಸಲಾಗಿದೆ.

ಈ ಕಾರ್ಮಿಕರು ಖಾನಾಪುರದಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಅಲ್ಲಿಯೇ ಸಿಲುಕಿಕೊಂಡಿದ್ದರು. ವಿನಾಯಿತಿ ಸಿಕ್ಕಿದ್ದರಿಂದಾಗಿ, ಹೇಗಾದರೂ ಊರು ಸೇರಬೇಕೆಂದು ಎರಡು ದಿನಗಳ ಹಿಂದೆ ಖಾನಾಪುರದಿಂದ ಹೊರಟಿದ್ದರು. 100 ಕಿ.ಮೀ.ಗೂ ಹೆ‌ಚ್ಚಿನ ದಾರಿಯನ್ನು ಅವರು ಕ್ರಮಿಸಿದ್ದರು.

ADVERTISEMENT

ಚಿಕ್ಕೋಡಿಯಲ್ಲಿ ಪೊಲೀಸರು ಅವರನ್ನು ತಡೆದು ವಿಚಾರಣೆ ನಡೆಸಿ ಆಸ್ಪತ್ರೆಗೆ ತಪಾಸಣೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಬಾಬುಲಾಲ್ ಕುಸಿದು ಬಿದ್ದಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಾರ್ಮಿಕ ಬಳಲಿಕೆಯಿಂದ ಸತ್ತರೋ, ಹಸಿವಿನಿಂದಲೋ ಎನ್ನುವ ಪ್ರಶ್ನೆಗಳು ಉಂಟಾಗಿವೆ.

ತಹಶೀಲ್ದಾರ್‌ ಸುಭಾಷ ಸಂಪಗಾವಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿ.ವಿ. ಶಿಂಧೆ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಂತೋಷ ಕೊಣ್ಣೂರೆ, ಸಿಪಿಐ ಆರ್.ಆರ್. ಪಾಟೀಲ, ಪಿಎಸ್ಐ ರಾಕೇಶ ಬಗಲಿ ಆಸ್ಪತ್ರೆಯಲ್ಲಿ ಇತರ ಕಾರ್ಮಿಕರಿಂದ ಮಾಹಿತಿ ಪಡೆದರು.

‘‌ಕಾರ್ಮಿಕರಿಗೆ ಪೊಲೀಸರು ಉಪಾಹಾರ ನೀಡಿದ್ದಾರೆ. ಹೀಗಾಗಿ, ಹಸಿವಿನಿಂದ ಸಾವಿಗೀಡಾಗಿದ್ದಾರೆ ಎನ್ನಲಾಗುವುದಿಲ್ಲ. ಕಾರ್ಮಿಕ ಹೃದಯಾಘಾತದಿಂದ ಮೃತರಾಗಿರುವ ಕುರಿತು ಪ್ರಾಥಮಿಕ ವರದಿಯಿಂದ ಗೊತ್ತಾಗಿದೆ. ಮೃತದೇಹ ಹಾಗೂ ಕಾರ್ಮಿಕರನ್ನು ಜಾರ್ಖಂಡ್‌ಗೆ ಕಳುಹಿಸುವ ಕುರಿತು ಪೊಲೀಸ್ ಅಧಿಕಾರಿಗಳನ್ನು ಕೋರಲಾಗಿದೆ’ ಎಂದು ತಹಶೀಲ್ದಾರ್ ಸುಭಾಷ ಸಂಪಗಾವಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.