ಬೆಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ಅಲ್‌ಖೈದಾ ಭಯೋತ್ಪಾದಕ ಸಂಘಟನೆ ಪರ ಪ್ರಚಾರ ನಡೆಸುತ್ತಿದ್ದ ಹಾಗೂ ಉಗ್ರ ಸಂಘಟನೆಗಳ ಮುಖಂಡರ ಪ್ರಚೋದನಕಾರಿ ಭಾಷಣಗಳನ್ನು ಹಂಚಿಕೊಳ್ಳುತ್ತಿದ್ದ ಆರೋಪದ ಮೇರೆಗೆ ಬಂಧಿಸಿರುವ ಜಾರ್ಖಂಡ್‌ನ ಮಹಿಳೆ ಶಮಾ ಪರ್ವೀನ್ ಅನ್ಸಾರಿ(30) ಅವರ ಚಟುವಟಿಕೆಗಳ ಕುರಿತು ಗುಜರಾತ್‌ನ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಹಾಗೂ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಸಿಬ್ಬಂದಿ ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿ ನಡೆಸುತ್ತಿದ್ದ ಹಲವು ರಹಸ್ಯ ಚಟುವಟಿಕೆಗಳ ಕುರಿತು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.
ಶಮಾ ಪರ್ವೀನ್ ಅವರು ಐದು ವರ್ಷಗಳಿಂದ ಹೆಬ್ಬಾಳದ ಎಂ.ಆರ್.ಪಾಳ್ಯದ ಮನೆಯಲ್ಲಿ ತಾಯಿ ಹಾಗೂ ಸಹೋದರನ ಜತೆಗೆ ನೆಲಸಿರುವುದು ಗೊತ್ತಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ವಿಡಿಯೊ ಹಂಚಿಕೊಂಡಿರುವುದು ಎಟಿಎಸ್ ತನಿಖೆಯಿಂದ ಬಯಲಾಗಿದೆ.
‘ಶಮಾ ಅವರು ಆನ್ಲೈನ್ ಮೂಲಕ ಜಿಹಾದಿ ಚಟುವಟಿಕೆ ನಡೆಸುತ್ತಿದ್ದರು. ಪ್ರಚೋದನಕಾರಿ ಸಂದೇಶಗಳನ್ನು ಹಂಚುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಕೇಂದ್ರ ಸರ್ಕಾರದ ವಿರುದ್ಧ ‘ಸಶಸ್ತ್ರ ಕ್ರಾಂತಿ’ಗೆ ಕರೆ ನೀಡಲು ಡಿಜಿಟಲ್ ವೇದಿಕೆ ಬಳಸುತ್ತಿದ್ದರು. ಆರೋಪಿಯ ಚಟುವಟಿಕೆಗಳು, ಕೇವಲ ಸೈದ್ದಾಂತಿಕ ಪ್ರಚಾರಕ್ಕಷ್ಟೇ ಸೀಮಿತ ಆಗಿರಲಿಲ್ಲ. ಧಾರ್ಮಿಕ ಭಿನ್ನಾಭಿಪ್ರಾಯ ಸೃಷ್ಟಿಸಲು ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಪ್ರಚೋದನಕಾರಿ ಸಂದೇಶ ಹರಡಲು ಸಾಮಾಜಿಕ ಜಾಲತಾಣವನ್ನು ಶಮಾ ಬಳಸಿಕೊಂಡಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಫೇಸ್‌ಬುಕ್‌ನಲ್ಲಿ ಎರಡು ಖಾತೆ, ಒಂದು ಇನ್‌ಸ್ಟಾಗ್ರಾಂ ಖಾತೆಯನ್ನು ಆರೋಪಿ ನಿರ್ವಹಿಸುತ್ತಿದ್ದರು. ಆ ಖಾತೆಗಳಿಗೆ 10 ಸಾವಿರ ಫಾಲೋವರ್ಸ್‌ಗಳಿದ್ದರು. ಅದರಲ್ಲಿ ಉಗ್ರ ಚಟುವಟಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.