ADVERTISEMENT

ಜಿಂದಾಲ್‌ ಲ್ಯಾಂಡ್ ಆಡಿಟ್‌ಗೆ ಎಚ್ಕೆ ಪಾಟೀಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 19:44 IST
Last Updated 29 ಜೂನ್ 2019, 19:44 IST
   

ಬೆಂಗಳೂರು: ಜಿಂದಾಲ್‌ಗೆ ನೀಡಿದ ಭೂಮಿಯಲ್ಲಿ ಯಾರು ಎಷ್ಟು ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಭೂ ಪರಿಶೋಧನೆ (ಲ್ಯಾಂಡ್ ಆಡಿಟ್‌) ಮಾಡಿಸಬೇಕು ಎಂದು ಗದಗ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ ಸಲಹೆ ನೀಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಜಿಂದಾಲ್‌ಗೆ 3,667 ಎಕರೆ ಭೂಮಿಯನ್ನು ಮಾರಾಟ ಬಗ್ಗೆ ಪರಿಶೀಲನೆ ನಡೆಸಲು ರಚಿಸಿರುವ ಸಚಿವ ಸಂಪುಟ ಉಪ ಸಮಿತಿ ಈ ಕುರಿತು ಆದ್ಯತೆ ಮೇರೆಗೆ ಕ್ರಮ ವಹಿಸಬೇಕು. ಆದಷ್ಟು ಬೇಗ ಮಾಹಿತಿಯನ್ನು ಕಲೆ ಹಾಕುವ ಕೆಲಸವನ್ನು ಮಾಡಬೇಕು ಎಂದು ಅವರು ಹೇಳಿದರು.

‘ಸರ್ಕಾರ, ಮೈಸೂರು ಮಿನರಲ್ಸ್‌ ಲಿಮಿಟೆಡ್‌ನಲ್ಲಿ ಜಿಂದಾಲ್‌ಗೆ ಸಂಬಂಧಿಸಿದ ದಾಖಲೆ ಪತ್ರಗಳು ಸಿಗುತ್ತಿಲ್ಲ. ಸಚಿವ ಸಂಪುಟ ಉಪ ಸಮಿತಿ ಯಾವ ರೀತಿ ಮಾಹಿತಿ ಪಡೆದುಕೊಳ್ಳುತ್ತದೆ ಎಂಬುದು ನನಗೆ ಗೊತ್ತಿಲ್ಲ. ನನ್ನ ಬಳಿ ಕೇಳಿದರೆ ಆಗ ನೋಡೋಣ’ ಎಂದು ಅವರು ಹೇಳಿದರು.

ADVERTISEMENT

ಗೃಹ ಸಚಿವರಿಗೆ ಪತ್ರ: ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಎಂ.ಬಿ. ಪಾಟೀಲರಿಗೆ ಮೂರು ಪುಟಗಳ ಪತ್ರ ಬರೆದಿರುವ ಎಚ್.ಕೆ. ಪಾಟೀಲರು,‍ಕೆಲವು ಸಲಹೆಗಳನ್ನೂ ನೀಡಿದ್ದಾರೆ.

ಭೂಮಿ ಮಾರಾಟ ಮಾಡಿದ ಮೇಲೆ ಆ ಪ್ರದೇಶದಲ್ಲಿ ಮೂರು ಅಡಿ ಆಳದಿಂದ ಹಿಡಿದು ನೆಲದೊಳಗೆ ಲಭ್ಯವಾಗಬಹುದಾದ ಖನಿಜ ನಿಕ್ಷೇಪ ಅಥವಾ ಇನ್ನು ಯಾವುದೇ ಸಂಪತ್ತು ಮಾಲೀಕನಿಗೆ ಸೇರುತ್ತದೆ ಎಂದು 2014ರಲ್ಲಿ ವಾಣಿಜ್ಯ ಇಲಾಖೆ ಅಧಿಸೂಚನೆ ಹೊರಡಿಸಿದೆ. ಆದರೆ, ಜಿಂದಾಲ್‌ಗೆ ಭೂಮಿಯನ್ನು ಲೀಸ್ ಕಂ ಸೇಲ್‌ ಡೀಡ್ ಮಾಡಿಕೊಡುವಾಗ ಈ ಅಧಿಸೂಚನೆ ಇರಲಿಲ್ಲ. ಜಿಂದಾಲ್‌ಗೆ ಮಾರಲು ಮುಂದಾಗಿರುವ 3,667 ಎಕರೆ ಭೂಮಿಯಲ್ಲಿ ಖನಿಜ ಸಂಪತ್ತು ಇದ್ದರೆ 2014ರ ಅಧಿಸೂಚನೆ ಅನ್ವಯ, ಅದು ಆ ಸಂಸ್ಥೆಯ ಪಾಲಾಗುತ್ತದೆ. ಕರ್ನಾಟಕ ಸರ್ಕಾರವು ನೈಸರ್ಗಿಕ ಸಂಪತ್ತಿನ ಮೇಲಿನ ಹಕ್ಕನ್ನು ಕಳೆದುಕೊಳ್ಳುತ್ತದೆ. ಈ ವಿಷಯವ ಸಚಿವ ಸಂಪುಟ ಉಪ ಸಮಿತಿಯ ಪರಿಶೀಲನೆಯಲ್ಲಿ ಆದ್ಯತೆಯ ವಿಷಯವಾಗಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಮೈಸೂರು ಮಿನರಲ್ಸ್ ಸಂಸ್ಥೆಗೆ ಜಿಂದಾಲ್‌ ಬಹುದೊಡ್ಡ ಮೊತ್ತವನ್ನು ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ಭಾರತೀಯ ಲೆಕ್ಕ ಪರಿಶೋಧಕರು ನೀಡಿರುವ ವರದಿ ಅನುಸಾರ ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ ಕೆಲವು ಶಿಫಾರಸು ಮಾಡಿದೆ. ಈ ಬಗ್ಗೆ ಕೈಗೊಂಡಿರುವ ಕ್ರಮಗಳನ್ನೂ ಸಮಿತಿ ಪರಿಶೀಲಿಸಬೇಕು. ಬಾಕಿ ಉಳಿಸಿಕೊಂಡಿರುವ ಸಂಸ್ಥೆಯು ಅದನ್ನು ಪಾವತಿಸುವ ಮುನ್ನವೇ ಸಲ್ಲಿಸಿರುವ ಮನವಿಯನ್ನು ಪರಿಗಣಿಸಬಹುದೇ ಎಂಬ ಕುರಿತು ಸಮಿತಿ ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.