ADVERTISEMENT

ಜೋಗಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆ ಇಳಿಕೆ

ಮಂಗನ ಕಾಯಿಲೆ: ಪ್ರವಾಸೋದ್ಯಮದ ಮೇಲೆ ಕರಿನೆರಳು

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 20:15 IST
Last Updated 23 ಜನವರಿ 2019, 20:15 IST
ಕಾರ್ಗಲ್ ಸಮೀಪವಿರುವ ವಿಶ್ವ ವಿಖ್ಯಾತ ಜೋಗ ಜಲಪಾತ ಸೊರಗಿರುವ ದೃಶ್ಯ ಮತ್ತು ಜೋಗದ ಗುಂಡಿಯ ಮಾರ್ಗದಲ್ಲಿ ಅಳವಡಿಸಿರುವ ಮಂಗನ ಕಾಯಿಲೆಯ ಎಚ್ಚರಿಕೆ ಫಲಕಗಳು
ಕಾರ್ಗಲ್ ಸಮೀಪವಿರುವ ವಿಶ್ವ ವಿಖ್ಯಾತ ಜೋಗ ಜಲಪಾತ ಸೊರಗಿರುವ ದೃಶ್ಯ ಮತ್ತು ಜೋಗದ ಗುಂಡಿಯ ಮಾರ್ಗದಲ್ಲಿ ಅಳವಡಿಸಿರುವ ಮಂಗನ ಕಾಯಿಲೆಯ ಎಚ್ಚರಿಕೆ ಫಲಕಗಳು   

ಕಾರ್ಗಲ್: ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆ ಪ್ರಸಕ್ತ ಸಾಲಿನಲ್ಲಿ ಇಳಿಮುಖವಾಗಿದ್ದು, ಮಂಗನ ಕಾಯಿಲೆ ಭೀತಿ ಇದಕ್ಕೆ ಕಾರಣವಿರಬಹುದು ಎಂದು ಸ್ಥಳೀಯ ಪ್ರವಾಸಿ ಗೈಡ್‌ಗಳು ಅಭಿಪ್ರಾಯಪಟ್ಟಿದ್ದಾರೆ.

ಜಲಪಾತದ ತಟದಲ್ಲಿ ನವೆಂಬರ್ ತಿಂಗಳಿನಿಂದ ವಿದೇಶಿ ಪ್ರವಾಸಿಗರು ಬೀಡು ಬಿಡಲು ಆರಂಭವಾಗುವುದು ವಾಡಿಕೆ. ಪ್ರವಾಸೋದ್ಯಮ ಇಲಾಖೆಯ ಮಾಹಿತಿಯ ಪ್ರಕಾರ ಮಾರ್ಚ್ ಅಂತ್ಯದವರೆಗೆ ಸುಮಾರು 2 ಸಾವಿರ ವಿದೇಶಿ ಪ್ರವಾಸಿಗರು ಪ್ರತಿ ಸಾಲಿನಲ್ಲಿ ಜೋಗದ ಗುಂಡಿಗೆ ಇಳಿದು ಬೇಸಿಗೆಯ ಜಲಪಾತದ ಸವಿಯನ್ನು ಸವಿಯುತ್ತಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಡಿಸೆಂಬರ್ 2018ರಲ್ಲಿ 130 ವಿದೇಶಿ ಪ್ರವಾಸಿಗರು, ಜನವರಿ 2019ರ ಅಂತ್ಯದ ವೇಳೆಗೆ ಕೇವಲ 240 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರಷ್ಟೆ.

‘ಸಾಮಾನ್ಯವಾಗಿ ಗೋವಾ ರಾಜ್ಯದಿಂದ ಮತ್ತು ಕಡಲ ತೀರದ ಕಾರವಾರ, ಗೋಕರ್ಣಗಳಿಂದ ವಿದೇಶಿ ಪ್ರವಾಸಿಗರು ಹಿಂಡು ಹಿಂಡಾಗಿ ಜೋಗ ಜಲಪಾತಕ್ಕೆ ಬೇಸಿಗೆಯಲ್ಲಿ ಭೇಟಿ ನೀಡುತ್ತಿದ್ದರು. ಮಲೆನಾಡಿನಲ್ಲಿ ಮಂಗನ ಕಾಯಿಲೆ ಪಸರಿಸಿರುವ ಮಾಹಿತಿ ವಿದೇಶಿ ಪ್ರವಾಸಿಗರಿಗೆ ಲಭ್ಯವಾಗಿರುವ ಕಾರಣ ಜೋಗಕ್ಕೆ ಬೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ’ ಎನ್ನುವುದು ಸ್ಥಳೀಯ ವ್ಯಾಪಾರಸ್ಥರಾದ ಚಂದ್ರಶೇಖರ ಭಟ್ ಅವರ ಅನಿಸಿಕೆ.

ADVERTISEMENT

ಮಲೆನಾಡಿನ ಅರಲಗೋಡು, ಕಾರ್ಗಲ್ ಮತ್ತು ಜೋಗದ ಭಾಗಗಳಲ್ಲಿ ವ್ಯಾಪಿಸಿರುವ ಮಂಗನ ಕಾಯಿಲೆ ಪ್ರವಾಸೋದ್ಯಮದ ಮೇಲೆ ತನ್ನ ಕರಿನೆರಳನ್ನು ಚೆಲ್ಲಿರುವುದಕ್ಕೆ ಜೋಗ ಜಲಪಾತ ಸಾಕ್ಷಿಯಾಗಿದೆ.

ಜೋಗದಲ್ಲಿ ಕುಗ್ಗಿದ ಶಾಲಾ ಮಕ್ಕಳ ಕಲರವ: ‘ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಜೋಗ ಜಲಪಾತ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಶಾಲಾ ಮಕ್ಕಳ ಕಲರವ ಕಂಡು ಬರುತ್ತಿತ್ತು. ಚಿಣ್ಣರ ಶಾಲಾ ಪ್ರವಾಸದ ಭಾಗವಾಗಿ ಜಲಪಾತ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಶಾಲಾ ಮಕ್ಕಳು ಬರುತ್ತಿದ್ದರು. ಆದರೆ ಈ ಸಾಲಿನಲ್ಲಿ ಶಾಲಾ ಮಕ್ಕಳ ಆಗಮನದ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಬಹುಶಃ ಇದಕ್ಕೆ ಮಲೆನಾಡಿನಲ್ಲಿ ಕಂಡುಬಂದಿರುವ ಮಂಗನ ಕಾಯಿಲೆಯೂ ಒಂದು ಕಾರಣವಿರಬಹುದು’ ಎಂದು ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಅಧಿಕಾರಿ ನರ್ತನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.