ADVERTISEMENT

ಜೋಗ ಜಲಪಾತ: ಪರಿಸರ ಅನುಮೋದನೆಗೆ ನಿರ್ದೇಶನ

ಜೋಗ ಜಲಪಾತ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ

​ಪ್ರಜಾವಾಣಿ ವಾರ್ತೆ
Published 5 ಮೇ 2022, 19:32 IST
Last Updated 5 ಮೇ 2022, 19:32 IST
   

ಬೆಂಗಳೂರು: ಜೋಗ ಜಲಪಾತ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಉದ್ದೇಶಿಸಿ
ರುವ ಜೋಗ ನಿರ್ವಹಣಾ ಪ್ರಾಧಿಕಾರವು ಪರಿಸರ ಅನುಮೋದನೆ ಜೊತೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯಿಂದ ವನ್ಯಜೀವಿ ಅನುಮೋದನೆಯನ್ನೂ ಪಡೆಯಬೇಕು ಎಂದು ಅರಣ್ಯ ಇಲಾಖೆ ನಿರ್ದೇಶಿಸಿದೆ.

ಅರಣ್ಯ ಭೂಮಿಯಲ್ಲಿ ಪಂಚತಾರಾ ಹೋಟೆಲ್ ಕಟ್ಟಲು ಸಲ್ಲಿಸಿರುವ ಪ್ರಸ್ತಾವನೆಗಷ್ಟೇ ಅಲ್ಲದೆ ಕಂದಾಯ ಭೂಮಿಯಲ್ಲಿ ಕಟ್ಟಲು ಉದ್ದೇಶಿಸಿರುವ ಇತರೆ ಯೋಜನೆಗಳಿಗೂಈ ಶಿಫಾರಸು ಅನ್ವಯವಾಗಲಿದೆ. ಈ ಶಿಫಾರಸನ್ನು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಗಿರಿಧರ ಕುಲಕರ್ಣಿ ಸಲ್ಲಿಸಿರುವ ಆಕ್ಷೇಪಣೆಗಳಿಗೆ ಉತ್ತರ ಸಲ್ಲಿಸುವ ಸಮಯದಲ್ಲಿ ಮಾಡಲಾಗಿದೆ.

ಜೋಗ ಅಭಿವೃದ್ಧಿ ಯೋಜನೆಯ ಭಾಗವಾಗಿ ಸಾಗರ ತಾಲ್ಲೂಕಿನ ನಾಡವಾಡ ತಲಕಳಲೆ ಗ್ರಾಮದ ಸರ್ವೆ ಸಂಖ್ಯೆ 151ರಲ್ಲಿರುವ ಅರಣ್ಯ ಪ್ರದೇಶದಲ್ಲಿ ಪಂಚತಾರಾ ಹೋಟೆಲ್ ನಿರ್ಮಿಸುವ ಯೋಜನೆಗಾಗಿ 0.8536 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕಾಗಿ ಬಳಸುವ ಕುರಿತು ಅರಣ್ಯ ಇಲಾಖೆಗೆ ಶಿವಮೊಗ್ಗ ಜಿಲ್ಲಾಧಿಕಾರಿಯವರು ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಅನುಮೋದಿಸಿ ಕೇಂದ್ರ ಸರ್ಕಾರದಿಂದ ಅರಣ್ಯ (ಸಂರಕ್ಷಣಾ) ಕಾಯ್ದೆ 1980ರ ಅಡಿ ಮೊದಲನೇ ಹಂತದ ಅನುಮೋದನೆ ಪಡೆಯಲು ಅರಣ್ಯ ಇಲಾಖೆಯು 20221ರ ಜುಲೈ 14ರಂದು ಶಿಫಾರಸು ಮಾಡಿತ್ತು.

ADVERTISEMENT

ಈ ಪ್ರದೇಶವು ಸಿಂಗಳಿಕ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುತ್ತಿರುವುರಿಂದ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೈಗೊಳ್ಳಲು ಅನುಮತಿ ನೀಡಬಾರದು ಎಂದು ಗಿರಿಧರ ಕುಲಕರ್ಣಿ ಅವರು ಜುಲೈನಲ್ಲಿ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಕೇಂದ್ರ ಪರಿಸರ ಸಚಿವಾಲಯಕ್ಕೆ ಪತ್ರ ಬರೆದಿದ್ದರು.

ಅರಣ್ಯೇತರ ಭೂಮಿಯಲ್ಲೂ ವಿವಿಧ ಪ್ರವಾಸಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು ₹165 ಕೋಟಿಯ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯಿಂದ ವನ್ಯಜೀವಿ ಅನುಮೋದನೆ ಪಡೆಯುವುದು ಕಡ್ಡಾಯ ಎಂದೂ ಅವರು ಗಮನ ಸೆಳೆದಿದ್ದರು.

ಈ ಬಗ್ಗೆ ನಿಯಮಾವಳಿಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಪರಿಸರ ಸಚಿವಾಲಯವು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಆಗಸ್ಟ್ 9ರಂದು ಪತ್ರ ಬರೆದಿತ್ತು. ಕೇಂದ್ರ ಸರ್ಕಾರದ ಪತ್ರದ ಮೇರೆಗೆ ಸೆಪ್ಟೆಂಬರ್‌ನಲ್ಲಿ ಅರಣ್ಯ ಇಲಾಖೆಗೆ ಪ್ರಸ್ತಾವನೆಯನ್ನು ವಾಪಸ್ ಕಳುಹಿಸಿದ್ದ ರಾಜ್ಯ ಸರ್ಕಾರವು ವಿಸ್ತೃತ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಈ ಕುರಿತು ರಾಜ್ಯ ಸರ್ಕಾರಕ್ಕೆ ಮಾರ್ಚ್‌ನಲ್ಲಿ ವರದಿ ಸಲ್ಲಿಸಿರುವ ಅರಣ್ಯ ಇಲಾಖೆಯು ಅರಣ್ಯೇತರ ಭೂಮಿಯಲ್ಲೂ ಪ್ರವಾಸೋದ್ಯಮ ಚಟುವಟಿಕೆ
ಗಳಿಗೆ ಪರಿಸರ ಅನುಮೋದನೆ ಜೊತೆಗೆ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯಿಂದ ವನ್ಯಜೀವಿ ಅನುಮೋದನೆಯನ್ನೂ ಪಡೆಯುವುದು ಅವಶ್ಯ ಎಂದು ಹೇಳಿದೆ. ಆದರೆ, ಇದೇ ವರದಿಯಲ್ಲಿ ಪಂಚತಾರಾ ಹೋಟೆಲ್ ಕಟ್ಟಲು ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.