ADVERTISEMENT

ಜಂಟಿ ಸಮಿತಿ ಪರಿಶೀಲನೆಗೆ ಎನ್‌ಜಿಟಿ ನಿರ್ದೇಶನ

ತ್ಯಾಜ್ಯ ವಿಲೇವಾರಿ ನಿಯಮ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 19:24 IST
Last Updated 27 ಏಪ್ರಿಲ್ 2019, 19:24 IST

ನವದೆಹಲಿ: ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ನಿಯಮ ಉಲ್ಲಂಘನೆ ಕುರಿತು ರಾಮ್ಕಿ ಎನ್ವಿರೊ ಎಂಜಿನಿಯರ್ಸ್ ಮತ್ತು ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆ ಎದುರಿಸುತ್ತಿರುವ ಆರೋಪ ಕುರಿತು ವಸ್ತುಸ್ಥಿತಿ ಅರಿಯಲು ಜಂಟಿ ಸಮಿತಿಯೊಂದನ್ನು ರಚಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶಿಸಿದೆ.

ಟಿ.ಎಂ. ಉಮಾಶಂಕರ್‌ ಮತ್ತಿತರರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯಲ್‌ ನೇತೃತ್ವದ ಹಸಿರು ಪೀಠವು ಈ ಕುರಿತು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಕೇಂದ್ರದ ಪರಿಸರ ಸಚಿವಾಲಯ, ಕೇಂದ್ರ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗಳ ಸಿಬ್ಬಂದಿ ಒಳಗೊಂಡ ಸಮಿತಿಯನ್ನು ಕೂಡಲೇ ರಚಿಸಬೇಕು. ಸಮಿತಿಯು ಪರಿಶೀಲನೆ ನಡೆಸಿ ಎರಡು ತಿಂಗಳಲ್ಲಿ ವಾಸ್ತವಾಂಶದ ವರದಿ ಸಲ್ಲಿಸಬೇಕು ಎಂದು ಪೀಠವು ಆದೇಶಿಸಿದೆ.

ADVERTISEMENT

ಪರಿಶೀಲನೆಗಾಗಿ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಸಮಿತಿಗೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ
ಮಂಡಳಿಯನ್ನು ನೋಡಲ್ ಸಂಸ್ಥೆಯಾಗಿ ನೇಮಿಸಬೇಕು ಎಂದೂ ಸೂಚಿಸಿರುವ ಪೀಠವು, ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್‌ 8ಕ್ಕೆ ನಿಗದಿಪಡಿಸಿದೆ.

ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಅಗತ್ಯ ಪರಿಸರ ಅನುಮತಿ ಪಡೆಯಲಾಗಿಲ್ಲ. ಗಾಳಿ, ನೀರು (ಮಾಲಿನ್ಯ ನಿಯಂತ್ರಣ ತಡೆ) ಮತ್ತು ಪರಿಸರ (ಸಂರಕ್ಷಣೆ) ಕಾಯ್ದೆಗಳನ್ನೂ ಉಲ್ಲಂಘಿಸಲಾಗಿದೆ ಎಂದು ದೂರುವ ಮೂಲಕ ಘಟಕ ಮುಚ್ಚುವಂತೆ ಕೋರಿದ್ದ ರಿಟ್‌ ಅರ್ಜಿಯನ್ನು ರಾಜ್ಯ ಹೈಕೋರ್ಟ್‌ ಎನ್‌ಜಿಟಿಗೆ ವರ್ಗಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.