ಹೈಕೋರ್ಟ್
ಬೆಂಗಳೂರು: ‘ಲೋಕಾಯುಕ್ತ ಪೊಲೀಸರಿಂದ ದಾಳಿ ನಡೆಸುವ ಬೆದರಿಕೆಯೊಡ್ಡಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಶಿ ಅವರಿಗೆ ಹೊಸದಾಗಿ ನೋಟಿಸ್ ನೀಡಿ ವಿಚಾರಣೆಗೆ ಕರೆಯಿಸಿಕೊಳ್ಳಿ’ ಎಂದು ಹೈಕೋರ್ಟ್, ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ.
‘ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಲೋಕಾಯುಕ್ತ ಪೊಲೀಸರು ನನಗೆ ನೀಡಿರುವ ನೋಟಿಸ್ ರದ್ದುಪಡಿಸಬೇಕು’ ಎಂದು ಕೋರಿ ಶ್ರೀನಾಥ್ ಜೋಶಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ವಿಚಾರಣೆ ವೇಳೆ ಲೋಕಾಯುಕ್ತ ಪೊಲೀಸರ ಪರ ಹಾಜರಾಗಿದ್ದ ಪದಾಂಕಿತ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ‘ಅರ್ಜಿದಾರರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ 2025ರ ಜೂನ್ 15ರಂದು ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗದೇ ನಾಪತ್ತೆಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಹೇಳಿಕೆ ಪಡೆದುಕೊಳ್ಳುವ ಅವಶ್ಯವಿದೆ. ಆದ್ದರಿಂದ, ನೋಟಿಸ್‌ಗೆ ನೀಡಿರುವ ತಡೆ ಆದೇಶ ತೆರವುಗೊಳಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಈ ಮನವಿಯನ್ನು ಪರಿಗಣಿಸಿದ ನ್ಯಾಯಪೀಠ, ‘ತನಿಖೆಗೆ ಹಾಜರಾಗುವಂತೆ ಸೂಚಿಸಿ ಲೋಕಾಯುಕ್ತ ಪೊಲೀಸರು ಅರ್ಜಿದಾರರಿಗೆ ಜೂನ್ 15ರಂದು ನೋಟಿಸ್ ಜಾರಿ ಮಾಡಿ, ಒಂದು ದಿನದಲ್ಲಿ ವಿಚಾರಣೆಗೆ (ಜೂನ್ 16) ಹಾಜರಾಗುವಂತೆ ಸೂಚಿಸಿರುವುದನ್ನು ಗಮನಿಸಲಾಗಿದೆ. ವಿಚಾರಣೆಗೆ ಹಾಜರಾಗಲು ನಿಗದಿಪಡಿಸಿದ್ದ ಸಮಯ ಈಗಾಗಲೇ ಮುಗಿದಿದೆ. ಆದ್ದರಿಂದ, ಜೋಶಿ ಅವರಿಗೆ ಹೊಸದಾಗಿ ನೋಟಿಸ್ ಜಾರಿ ಮಾಡಬೇಕು. ನೋಟಿಸ್ ನೀಡಿದ ನಂತರ 10 ದಿನಗಳಲ್ಲಿ ಜೋಶಿ ತನಿಖಾಧಿಕಾರಿ ಮುಂದೆ ಹಾಜರಾಗಬೇಕು’ ಎಂದು ನಿರ್ದೇಶಿಸಿ ಅರ್ಜಿ ವಿಲೇವಾರಿ ಮಾಡಿದೆ.
ಅಂತೆಯೇ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಒಂದು ವೇಳೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದರೆ ಅದನ್ನು ಕಾನೂನು ಪ್ರಕಾರ ಪರಿಗಣಿಸಬೇಕು’ ಎಂದೂ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ‘ನನ್ನ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಪ್ರಕರಣದ ಮತ್ತೊಬ್ಬ ಆರೋಪಿ ಮಾಜಿ ಕಾನ್‌ಸ್ಟೆಬಲ್ ನಿಂಗಪ್ಪ ಸಾವಂತ್ ಸಲ್ಲಿಸಿರುವ ಅರ್ಜಿ ಮೇಲಿನ ಆದೇಶವನ್ನು ನ್ಯಾಯಪೀಠ ಇದೇ ವೇಳೆ ಕಾಯ್ದಿರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.