
ನವದೆಹಲಿ: ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಲಂಚದ ಆರೋಪ ಹೊರಿಸಿ ಮಾನಹಾನಿಕರ ಸುದ್ದಿ ಪ್ರಕಟಿಸಿದ ಅಂದಿನ ಸಂಜೆ ದಿನಪತ್ರಿಕೆ (ಈಗ ಬೆಳಗಿನ ದಿನಪತ್ರಿಕೆ) ‘ಹಲೋ ಮೈಸೂರು’ ಸಂಪಾದಕ ಟಿ.ಗುರುರಾಜ್ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.
ಗುರುರಾಜ್ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ ಪೀಠವು ಪ್ರತಿವಾದಿಗೆ ನೋಟಿಸ್ ಜಾರಿ ಮಾಡಿತು.
ಪ್ರಕರಣದಲ್ಲಿ ಗುರುರಾಜ್ (50) ಅವರನ್ನು ಖುಲಾಸೆಗೊಳಿಸಿ ಮೈಸೂರಿನ ಜೆ.ಎಂ.ಎಫ್.ಸಿ 3ನೇ ನ್ಯಾಯಾಲಯ 2013ರ ಸೆಪ್ಟೆಂಬರ್ 30ರಂದು ನೀಡಿದ್ದ ಆದೇಶ ಪ್ರಶ್ನಿಸಿ ದೂರುದಾರರೂ ಆದ ಅಂದಿನ ಕೆ.ಆರ್.ಪೊಲೀಸ್ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ಎನ್.ಸುರೇಶ್ ಬಾಬು ಅವರು ಹೈಕೋರ್ಟ್ ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.
ಪ್ರಕರಣವೇನು?: ‘ಸುರೇಶ್ ಬಾಬು ಒಂದಂಕಿ ಲಾಟರಿ ಆಡುವುದಕ್ಕೆ ಸಹಕರಿಸುವ ಮೂಲಕ ಲಂಚ ಪಡೆದಿದ್ದಾರೆ. ಚಾಮುಂಡಿ ಬೆಟ್ಟದ ಸಮೀಪ ವಾಹನಗಳನ್ನು ಪಾರ್ಕ್ ಮಾಡಲು ಅವಕಾಶ ಮಾಡಿಕೊಟ್ಟು ಪಾರ್ಕಿಂಗ್ ಏಜೆಂಟ್‌ಗಳಿಂದಲೂ ಲಂಚ ಪಡೆದಿದ್ದಾರೆ’ ಎಂದು ಆರೋಪಿಸಿ 2004ರ ಆಗಸ್ಟ್ 3ರಂದು ಹಲೋ ಮೈಸೂರು ಸಂಜೆ ದಿನಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.